ಮೂಡಬಿದಿರೆ: ತಾಲೂಕಿನ ಗಂಟಾಲ್‌ಕಟ್ಟೆಯಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆಗೆ ದಾಳಿ ನಡೆಸಿದ ಮೂಡುಬಿದ್ರೆ ಪೊಲೀಸರು ಮೂರು ದನಗಳನ್ನು ರಕ್ಷಣೆ ಮಾಡಿದ್ದಾರೆ.
ಗಂಟಾಲ್‌ಕಟ್ಟೆಯ ಜಲೀಲ್ ಕಲ್ಲಬೆಟ್ಟು ಎಂಬುವವರ ಮನೆಯ ಹಿಂಭಾಗದ ಗುಡ್ಡದ ಕಾಡಿನಲ್ಲಿ ಹಸುವನ್ನು ಕಡಿದು ಮಾಂಸ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿದ್ದು ಅದರಂತೆ ದಾಳಿ ನಡೆಸಲಾಗಿತ್ತು.

ದಾಳಿಯ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು ಆರೋಪಿಗಳು ದನವನ್ನು ಕಡಿದು ಮಾಂಸ ಮಾಡುತ್ತಿರುವುದು ಕಂಡುಬಂದಿದೆ.
ಪೊಲೀಸರು ಸ್ಥಳದಲ್ಲಿದ್ದ ಸುಮಾರು 50 ಕೆ.ಜಿ. ದನದ ಮಾಂಸ ಮತ್ತು ಅದನ್ನು ಕತ್ತರಿಸಲು ಬಳಸಿದ ಪರಿಕರಗಳನ್ನು , ಆರೋಪಿಗಳ ಎರಡು ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಕಡಿಯಲು ಕದ್ದು ತಂದಿದ್ದ ಮೂರು ದನಗಳನ್ನು ರಕ್ಷಿಸಿ, ಗೋಶಾಲೆಗೆ ಬಿಟ್ಟಿದ್ದಾರೆ.

ಇನ್ನು ಗೋ ಕಳ್ಳರ ಗುರುತು ಪತ್ತೆಯಾಗಿದ್ದು ಆರೋಪಿಗಳನ್ನು ಜಲೀಲ್ ಕಲ್ಲಬೆಟ್ಟು, ಸಾಹಿಲ್ ಮತ್ತು ಆತನ ಮಗ ಸೊಹೇಲ್, ಹಾಗೂ ಕುದ್ರೋಳಿ ನಿವಾಸಿ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಆದರೆ ಪೊಲೀಸರು ದಾಳಿ ಮಾಡುತ್ತಿದ್ದಂತೆ ಆರೋಪಿಗಳು ಮನೆಯ ಹಿಂಬದಿಯ ಗುಡ್ಡದಲ್ಲಿ ಪರಾರಿಯಾಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕಾರ್ಯಾಚರಣೆಯಲ್ಲಿ ಮೂಡಬಿದಿರೆ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ. ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಪಿ.ಎಸ್.ಐ. ಕೃಷ್ಣಪ್ಪ, ಅಖಿಲ್ ಅಹ್ಮದ್, ಹಾಗೂ ನಾಗರಾಜ್ ಪಾಲ್ಗೊಂಡಿದ್ದರು


