ಮಸ್ಕತ್ – ಮಂಗಳೂರು ನೇರ ವಿಮಾನ ಸೇವೆ ಸ್ಥಗಿತ: ಸಂಕಷ್ಟಕ್ಕೆ ಸಿಲುಕಿದ ಅನಿವಾಸಿ ಭಾರತೀಯರಿಂದ ಸಂಸದರಿಗೆ ಮನವಿ

ಮಸ್ಕತ್: ಕಳೆದ ಮೂರು ತಿಂಗಳಿಂದ ಮಂಗಳೂರು–ಮಸ್ಕತ್ ನೇರ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು ,ಇದರಿಂದ ತೀವ್ರ ತೊಂದರೆಗೊಳಗಾದ ಅನಿವಾಸಿ ಭಾರತೀಯರು ಈ ಸೇವೆಯನ್ನು ಮತ್ತೆ ಪುನರಾರಂಭಿಸಬೇಕು ಎಂದು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹಾಗೂ ಉಡುಪಿ –ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಗಲ್ಫ್‌ನ ಬಹುತೇಕ ರಾಷ್ಟ್ರಗಳಿಗೆ ನೇರ ವಿಮಾನ ಸೇವೆ ಮುಂದುವರಿದಿರುವ ಸಂದರ್ಭದಲ್ಲಿ, ಇತ್ತೀಚೆಗೆ ಕುವೈತ್ ದೇಶಕ್ಕೂ ನೇರ ವಿಮಾನ ಸೇವೆ ಆರಂಭಗೊಂಡಿದೆ. ಆದರೆ ಮಸ್ಕತ್‌ನಿಂದ ಮಂಗಳೂರಿಗೆ ಪ್ರಯಾಣಿಸುವ ಕುಮುಟ, ಕುಂದಾಪುರ, ಉಡುಪಿ, ಚಿಕ್ಕಮಗಳೂರು, ಮಂಗಳೂರು ಹಾಗೂ ಕಾಸರಗೋಡು ಪ್ರದೇಶದ ಅನಿವಾಸಿಗಳು ಈಗ ದೆಹಲಿ, ಮುಂಬೈ ಅಥವಾ ಕೇರಳದ ಕನ್ನೂರು ಮೂಲಕ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿದೆ. ವಿಮಾನದಲ್ಲೇ ದಿನವಿಡೀ ಪ್ರಯಾಣ ಮಾಡಿ ನಂತರ ಮಂಗಳೂರು ತಲುಪಬೇಕಾಗಿದೆ.

ಮಂಗಳೂರು–ಮಸ್ಕತ್ ಗೆ ಈ ಮೊದಲು ವಾರಕ್ಕೆ ನಾಲ್ಕು ವಿಮಾನಗಳು ನಿಯಮಿತವಾಗಿ ನೇರ ಸಂಚಾರ ಮಾಡುತ್ತಿದ್ದವು. ದಶಕಗಳಿಂದ ನಿರಂತರವಾಗಿ ನಡೆದಿದ್ದ ಈ ಸೇವೆ ಅಚಾನಕ್ ಆಗಿ ಸ್ಥಗಿತಗೊಂಡಿರುವುದು ಮಸ್ಕತ್‌ನಲ್ಲಿ ನೆಲೆಸಿರುವ ಕರಾವಳಿ ಪ್ರದೇಶದ ಪ್ರಯಾಣಿಕರಿಗೆ ಸಂಕಷ್ಟ ಉಂಟುಮಾಡಿದೆ. ವಾರಕ್ಕೆ ನಾಲ್ಕು ವಿಮಾನಗಳ ಬದಲು ಕನಿಷ್ಠ ಎರಡು ವಿಮಾನ ಸೇವೆ ಮರುಪ್ರಾರಂಭಿಸಬೇಕೆಂದು ಕೇಳಿಕೊಂಡಿದ್ದಾರೆ.

ಓಮಾನ್‌ನ ಹಿರಿಯ ಸಮುದಾಯ ನಾಯಕ ಮಲ್ಲಾರ್ ಶಶಿಧರ ಶೆಟ್ಟಿಯವರು ಹಾಗೂ ಕರಾವಳಿ ಕರ್ನಾಟಕದ ಹಲವು ಸಮುದಾಯ ಸಂಘಟನೆಗಳು ಮತ್ತು ಸಾಂಸ್ಕೃತಿಕ ವೇದಿಕೆಗಳು, ಗಡಿನಾಡ ಸಾಹಿತ್ಯ ಅಕಾಡೆಮಿ – ಓಮಾನ್, ಕೆಎಂಸಿಸಿ ಮಂಜೇಶ್ವರ ಮಂಡಲ ಅಧ್ಯಕ್ಷ ಅಬುಬಕರ್ ರಾಯಲ್ ಬೂಲ್ಲಾರ್, ಕರ್ನಾಟಕ ಜಾನಪದ ಪರಿಷತ್ತು – ಓಮಾನ್ ಘಟಕ ಅಧ್ಯಕ್ಷ ಶಿವಾನಂದ ಕೋಟ್ಯಾನ್, ಮೂಗವೀರ ಮಸ್ಕತ್ ಅಧ್ಯಕ್ಷ ಪದ್ಮಕರ ಮೆಂಡನ್, ಮಸ್ಕತ್ ಹಿರಿಯರಾದ ಯುವರಾಜ್ ಮಸ್ಕತ್, ವಿಠಲ ಪೂಜಾರಿ, ಮತ್ತು ಮಸ್ಕತ್ ಕ್ರಿಕೆಟ್ ಹಿರಿಯ ಆಟಗಾರ ಶತೀಶ್ ಬಾರ್ಕರು ಸಹಿತ ಉಡುಪಿ ಸಾಮಾಜಿಕ ಮುಂದಾಳು ಉದಯ ಕುಮಾರ್ ಶೆಟ್ಟಿ ಮತ್ತು ಕಲಾವಿದ ರಾಜಾ ಕಟಪಾಡಿ ಮುಂತಾದವರು ಶಾಸಕರ ಹಾಗೂ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸರ್ಕಾರ ಮತ್ತು ವಿಮಾನಯಾನ ಇಲಾಖೆಯು ಈ ವಿಷಯಕ್ಕೆ ತಕ್ಷಣ ಸ್ಪಂದಿಸಿ, ಮಸ್ಕತ್–ಮಂಗಳೂರು ನೇರ ವಿಮಾನ ಸೇವೆ ಮರುಪ್ರಾರಂಭಗೊಳಿಸುವಂತೆ ಅವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *