ಗದಗ: ಹಿಂದುಳಿದವರಿಗೆ, ದಲಿತರಿಗೆ ಹಿಂದೂ ಸಮಾಜದಲ್ಲಿ ಯಾವ ಬೆಂಬಲವೂ ಸಿಗುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ಗದಗನಲ್ಲಿ ಮಾತನಾಡಿದ ಅವರು, ‘ರಾಯಣ್ಣ, ಚೆನ್ನಮ್ಮ ಬ್ರಿಗೇಡ್ಗೆ ಯಾವ ಹೆಸರು ಇಡಬೇಕು ಎಂದು ಚರ್ಚೆಯಾಗಿದೆ. ಇದೇ ತಿಂಗಳು 20 ನೇ ತಾರೀಖು ಬೃಹತ್ ಸಮಾವೇಶ ನಡೆಸಲು ಪ್ಲಾನ್ ಮಾಡಲಾಗಿದೆ ಎಂದರು.
ಸಂಘಟನೆ ಮಾಡಲು ಸಾಕಷ್ಟು ಪೋನ್ ಕರೆಗಳು ಬರುತ್ತಿದೆ. ಹೀಗಾಗಿ ಸಾಧು ಸಂತರ ಮಾರ್ಗದರ್ಶನದಲ್ಲಿ ಯಾವ ಹೆಸರು ಇಡಬೇಕು. ಯಾವ ರೂಪದಲ್ಲಿ ಸಂಘಟನೆ ತೆಗೆದುಕೊಂಡು ಹೋಗಬೇಕು ಎನ್ನುವುದು ಗೊತ್ತಾಗುತ್ತದೆ. ಆಗಿನಿಂದ ಮುಂದಿನ ಚಟುವಟಿಕೆ ಆರಂಭ ಮಾಡುತ್ತೇವೆ. ಬಸವನಗೌಡ ಪಾಟೀಲ್ ಯತ್ನಾಳ್ ಕೂಡ ಬರುತ್ತಾರೆ. ಹಾಗಂತ ಇದು ಈಶ್ವರಪ್ಪ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವ ಅಲ್ಲ. ಇದು ಸಾಧು ಸಂತರ ನೇತೃತ್ವದಲ್ಲಿ ನಡೆಯುತ್ತದೆ. ಇದಕ್ಕೆ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಕೂಡ ಸಾಥ್ ನೀಡಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿಯಲ್ಲಿ ಹಿಂದುತ್ವದ ತತ್ವ ಸಿದ್ದಾಂತಗಳು ಈಗ ಇಲ್ಲ. ಈವಾಗ ಹಿಂದುತ್ವ ಬಿಟ್ಟ ಬಿಜೆಪಿಯಲ್ಲಿ ಸ್ವಜನ ಪಕ್ಷಪಾತ ನಡೆಯುತ್ತಿದೆ. ಇದಕ್ಕೆ ಸರಿಯಾಗಿ ಬ್ರೇಕ್ ಹಾಕಬೇಕು, ಹಿಂದುತ್ವಕ್ಕೆ ಸರಿಯಾದ ಬೆಲೆ ಸಿಗಬೇಕು. ಬಿಜೆಪಿ ಕುಟುಂಬ ರಾಜಕಾರಣದಿಂದ ಮುಕ್ತವಾಗಬೇಕು. ಬಿವೈ ವಿಜಯೇಂದ್ರ ಕಾಂಗ್ರೆಸ್ ಪಕ್ಷದ ಭಿಕ್ಷೆಯಿಂದ ಶಾಸಕರಾಗಿದ್ದಿರಿ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಅದಕ್ಕೆ ಈವರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಉತ್ತರ ನೀಡಿಲ್ಲ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು 10 ಸಾವಿರ ವೋಟ್ನಿಂದ ಗೆದ್ದರು. ಏನು ಹೊಂದಾಣಿಕೆಯಾಗಿತ್ತು ಎನ್ನುವುದನ್ನು ಡಿಕೆ ಶಿವಕುಮಾರ್ ಬಹಿರಂಗ ಮಾಡಲಿ. ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬರ್ತಾಯಿದ್ದಾರೆ. ಈ ಹೊಂದಾಣಿಕೆ ರಾಜಕಾರಣ ಮುಕ್ತಾಯವಾಗಬೇಕು. ಈವೆಲ್ಲ ಬಿಜೆಪಿ ಪಕ್ಷದಲ್ಲಿ ಚರ್ಚೆಯಾಗಬೇಕು, ಇವಾಗ ಆಗುತ್ತಿವೆ ಎಂದು ಯಡಿಯೂರಪ್ಪ ಕುಟುಂಬ ವಿರುದ್ಧ ವಾಗ್ದಾಳಿ ನಡೆಸಿದರು.