ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ‘ಮಂಗಳೂರು ದಸರಾ’ದ ಶೋಭಾಯಾತ್ರೆಗೆ ಅ.02 ಗುರುವಾರ ಸಂಜೆ ಚಾಲನೆ ನೀಡಲಾಗಿದ್ದು, ಶುಕ್ರವಾರ ಮುಂಜಾನೆಯವರೆಗೆ ವೈಭವದಿಂದ ನೆರವೇರಿತು.

ದೇವಸ್ಥಾನದ ನವೀಕರಣದ ರೂವಾರಿ, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರು ಈ ಸಮಾರಂಭವನ್ನು ಉದ್ಘಾಟಿಸಿ ಬಳಿಕ ಮಾತನಾಡಿ, , “ಕುದ್ರೋಳಿ ದಸರಾ ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲ. ಇದು ಏಕತೆ, ಭಕ್ತಿ ಮತ್ತು ಸಂಪ್ರದಾಯದ ಉತ್ಸವ” ಎಂದರು.

ಕಾರ್ಯಕ್ರಮದ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಯರಾಜ್ ಸೋಮರಾಜ್, “ಕುದ್ರೋಳಿ ದಸರಾ ಮಂಗಳೂರಿನ ಸಾಂಸ್ಕೃತಿಕ ಗುರುತಿಗೆ ದಾರಿದೀಪವಾಗಿ ಮುಂದುವರಿದಿದೆ. ಸಾರ್ವಜನಿಕರ ಅತೀವ ಸಹಭಾಗಿತ್ವವು ಈ ಸಂಪ್ರದಾಯವು ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ತೋರಿಸುತ್ತದೆ” ಎಂದು ಹೇಳಿದರು.
ಅಲಂಕೃತಗೊಂಡಿದ್ದ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳನ್ನು ಭವ್ಯ ರಥಗಳ ಮೇಲಿರಿಸಿ, ಮಂಗಳಾರತಿ ಅರ್ಪಿಸುವುದರೊಂದಿಗೆ ಶೋಭಾಯಾತ್ರೆ ಪ್ರಾರಂಭವಾಯಿತು.

ಮಂಗಳೂರಿನ ಬೀದಿಗಳಲ್ಲಿ, ನಗರದ ಪ್ರಮುಖ ಭಾಗಗಳಲ್ಲಿ ರಾತ್ರಿಯಿಡೀ ಮೆರವಣಿಗೆ ಸಾಗಿ ಅಂತಿಮವಾಗಿ ಇಂದು ಮುಂಜಾನೆ ದೇವಸ್ಥಾನಕ್ಕೆ ಹಿಂದಿರುಗಿ ವಿಸರ್ಜನೆಗೊಳಿಸಲಾಯಿತು. ಈ ವೇಳೆ ಸ್ಥಳೀಯ ಸಂಸ್ಥೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ತಬ್ಧಚಿತ್ರಗಳು ನೋಡುಗರರನ್ನು ಆಕರ್ಷಿಸಿತು.

ಈ ಸಂದರ್ಭ ಎಂ.ಎಲ್.ಸಿ ಐವನ್ ಡಿಸೋಜಾ, ಕುದ್ರೋಳಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಜಯರಾಜ್ ಸೋಮರಾಜ್, ಉಪಾಧ್ಯಕ್ಷೆ ಊರ್ಮಿಳಾ ರಮೇಶ್ ಮತ್ತು ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷರಾದ ಡಾ. ಬಿ.ಜಿ. ಸುವರ್ಣ, ಸಮಿತಿ ಸದಸ್ಯರಾದ ಜಗದೀಪ್ ಸುವರ್ಣ, ಕೃತಿನ್ ಅಮೀನ್, ಶೈಲೇಂದ್ರ ಸುವರ್ಣ, ಹರೀಶ್ ಸುವರ್ಣ, ಲತೇಶ್ ಕೋಟ್ಯಾನ್ ಮತ್ತು ರಾಧಾಕೃಷ್ಣ ಲೀಲಾಕ್ಷ ಕರ್ಕೇರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.



