Breaking
25 Sep 2026, Fri

ನಕಲಿ ವೈದ್ಯನೊಬ್ಬನ ಹೈ ಡೋಸ್ ಇಂಜೆಕ್ಷನ್ ನಿಂದ ಪ್ರಾಣ ಕಳೆದುಕೊಂಡ 8 ವರ್ಷದ ಬಾಲಕಿ

ಕೋಲಾರ: ನಕಲಿ ವೈದ್ಯನೊಬ್ಬ ಹೈ ಡೋಸ್ ಇಂಜೆಕ್ಷನ್ ನೀಡಿದ ಪರಿಣಾಮ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆದಿದೆ.

ದೊಡ್ಡ ಇಗಲೂರು ಗ್ರಾಮದ ನಿವಾಸಿ ಬಾಲಕಿ ತಾನವಿ (8) ಮೃತಪಟ್ಟ ದುರ್ದೈವಿ.

ಬಾಲಕಿಗೆ ಜ್ವರ ಕಾಣಿಸಿಕೊಂಡ ಕಾರಣ, ಪೋಷಕರು ಅ.01 ಪಕ್ಕದ ಸಂತೇಹಳ್ಳಿ ಗ್ರಾಮದಲ್ಲಿರುವ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದರು. ಆದರೆ, ಅಲ್ಲಿನ ನಕಲಿ ವೈದ್ಯನು ಮಗುವಿಗೆ ನೀಡಬೇಕಾದ ಪ್ರಮಾಣಕ್ಕಿಂತ ಹೆಚ್ಚು ಅಥವಾ ದೊಡ್ಡವರಿಗೆ ನೀಡುವ ಮಾದರಿಯ ಪ್ರಬಲ ಇಂಜೆಕ್ಷನ್ ಅನ್ನು ಬಾಲಕಿಗೆ ನೀಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ಇಂಜೆಕ್ಷನ್ ತೆಗೆದುಕೊಂಡ ನಂತರ ತಾನವಿ ತೀವ್ರ ನೋವಿನಿಂದ ನರಳಾಡಲು ಪ್ರಾರಂಭಿಸಿದ್ದಾಳೆ. ಎರಡು ದಿನಗಳ ಕಾಲ ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ವಿಪರೀತ ನೋವು ಕಾಣಿಸಿಕೊಂಡಿದ್ದು, ಆ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿ ಹಸಿರು ಬಣ್ಣಕ್ಕೆ ತಿರುಗಿತ್ತು.

ಬಾಲಕಿಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದನ್ನು ಗಮನಿಸಿದ ಪೋಷಕರು ಅ.01 ರಂದು ಮಾಲೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ, ಅ.02 ಸಂಜೆ ರಕ್ತದ ವಾಂತಿ ಮಾಡಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಈ ಘಟನೆ ಸಂಬಂಧ ಆಕ್ರೋಶಗೊಂಡಿರುವ ಪೋಷಕರು ನಕಲಿ ವೈದ್ಯನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ನಕಲಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯ ಕ್ಲಿನಿಕ್‌ಗೆ ಬೀಗ ಹಾಕಿ ತಲೆಮರೆಸಿಕೊಂಡಿದ್ದಾನೆ.

Leave a Reply

Your email address will not be published. Required fields are marked *