ಕುಂದಾಪುರ: ಮೀನುಗಾರಿಕೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಮೃತಪಟ್ಟ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟ ಕೋಡಿ ಹೊಸಬೆಂಗ್ರೆಯ ನಿವಾಸಿಯ ಕುಟುಂಬಕ್ಕೆ ಮೀನುಗಾರಿಕೆ ಸಚಿವ ಮಾಂಕಲ್ ವೈಧ್ಯ ಮೃತನ ಕುಟುಂಬಕ್ಕೆ ಸಾಂತ್ವಾನ ತಿಳಿಸಿ ಹತ್ತು ಲಕ್ಷ ರೂ ಪರಿಹಾರದ ಚೆಕ್ ವಿತರಿಸಿದರು.

ಕೋಡಿ ಹೊಸಬೆಂಗ್ರೆಯ ಲಕ್ಷ್ಮಣ ಖಾರ್ವಿ ಹಾಗೂ ಶಾಂತಿ ಖಾರ್ವಿಯವರ ಪುತ್ರ ಶರತ್ ಖಾರ್ವಿ ಇತ್ತೀಚೆಗೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ದೋಣಿ ಮಗುಚಿ ದೋಣಿಯ ಅಡಿ ಭಾಗಕ್ಕೆ ಸಿಕ್ಕಿ ಮೃತಪಟ್ಟಿದ್ದರು.
ಈ ವೇಳೆ ಶರತ್ ಕುಟುಂಬದ ಜೊತೆ ಮಾತನಾಡಿದ ಸಚಿವರು ಮೀನುಗಾರರ ಜತೆ ಸರಕಾರ ಇದೆ ಎಂದರು.

ಇದೇ ವೇಳೆ ಸ್ಥಳೀಯರಾದ ಶಂಕರ ಬಂಗೇರ ಅವರು ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಿದರು. ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಮೀನುಗಾರರ ಸಮಸ್ಯೆಯ ಬಗ್ಗೆ ಸಚಿವರಿಗೆ ವಿವರಿಸಿದರು.
ಈ ಸಂದರ್ಭ ಶಾಸಕ ಕಿರಣ್ ಕೊಡ್ಗಿ, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳೀಯರು ಉಪಸ್ಥಿತರಿದ್ದರು.



