ಸಿದ್ದಕಟ್ಟೆ: ವಿವಿಧ ಕಾರಣಗಳಿಂದ ಕಟೀಲು ಕ್ಷೇತ್ರದ ಸೇವಾದರವನ್ನು ಏರಿಕೆ ಮಾಡಿರುವ ಹಿನ್ನಲೆ ಮತ್ತೊಮ್ಮೆ ಸೇವಾದರ ಮರು ಪರಿಷ್ಕರಣೆ ಮಾಡುವಂತೆ ಪ್ರಭಾಕರ ಪ್ರಭು ಅವರು ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರರಿಗೆ ಮನವಿ ನೀಡಿದ್ದಾರೆ.

ಮನವಿಯಲ್ಲಿ,ಕರಾವಳಿ ಜಿಲ್ಲೆಗಳ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯವರಾದ ತಾವು ಪ್ರಸ್ತುತ ಮಾರುಕಟ್ಟೆಗಳಲ್ಲಿನ ಪೂಜಾ ಸಾಮಾಗ್ರಿ ದರ ಹೆಚ್ಚಳ ಮತ್ತು ಸಿಬ್ಬಂದಿ ವೇತನ ಹೆಚ್ಚಳವಾಗಿರುವ ಹಾಗೂ ಇನ್ನಿತರ ಕಾರಣಗಳಿಂದ ದೇವಸ್ಥಾನದಲ್ಲಿ ಪ್ರತಿನಿತ್ಯ ಜರಗಲಿರುವ ವಿವಿಧ ಸೇವೆಗಳಿಗೆ ಈ ಹಿಂದೆ ನಿಗದಿಪಡಿಸಿರುವ ಸೇವಾದರಗಳನ್ನು ಪರಿಷ್ಕರಿಸಿ ಏರಿಕೆ ಮಾಡಿ ಅಕ್ಟೋಬರ್ ತಿಂಗಳಿಂದ ಅನ್ವಯವಾಗಲಿದೆ ಎಂದು ಪ್ರಕಟಣೆ ಹೊರಡಿಸಿರುತ್ತೀರಿ.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ಒಳಪಡುವ ದೇವಸ್ಥಾನವಾಗಿರುವುದರಿಂದ ತಾವು ಈಗಾಗಲೇ ಪರಿಷ್ಕರಣೆ ಮಾಡಿರುವ ಸೇವೆಗಳ ದರವು ಹಿಂದಿನ ದರಕ್ಕಿಂತ ದುಪ್ಪಟ್ಟು ಹತ್ತಿರವಾಗಿದೆ.
ಕರಾವಳಿಯ ಜಿಲ್ಲೆಯ ತುಳುನಾಡ ಭಕ್ತರು ಹಾಗೂ ರಾಜ್ಯದ ಬೇರೆ ಬೇರೆ ಊರುಗಳಿಂದ ಬರುವ ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಹರಕೆಯ ರೂಪದಲ್ಲಿ ವಿವಿಧ ಸೇವೆಗಳನ್ನು ಪೂರೈಸುತ್ತಿರುವುದು ಹಿಂದೂಗಳ ನಂಬಿಕೆಯಾಗಿದ್ದು ,ಇದೊಂದು ಹಿಂದಿನಿಂದ ಬಂದಿರುವ ವಾಡಿಕೆಯಾಗಿರುತ್ತದೆ.

ದೇವಸ್ಥಾನಕ್ಕೆ ಶ್ರೀಮಂತರಿಂದ ಹಿಡಿದು ಕಡು ಬಡವರು ಸಹ ಬಂದು ದರ್ಶನ ಪಡೆದು ಸೇವೆಗಳನ್ನು ಸಲ್ಲಿಸಿ ದೇವಿಯಲ್ಲಿ ಪ್ರಾರ್ಥನೆ ಮಾಡಿ ಸಂತೃಪ್ತಿ ಹೊಂದುವವರಾಗಿರುತ್ತಾರೆ . ಈ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಸೇವಾ ದರಗಳನ್ನು ದುಪ್ಪಟ್ಟು ಮಾಡಿರುವುದು ಸಾರ್ವಜನಿಕ ವಲಯಗಳಲ್ಲಿ ಹೆಚ್ಚಿನ ಹಿಂದೂ ಭಕ್ತರು ಅಸಮಧಾನಗೊಂಡಿದ್ದು , ಮೌನದಿಂದಲೇ ಪ್ರತಿರೋಧ ವ್ಯಕ್ತಪಡಿಸುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ.
ಈ ಹಿನ್ನಲೆಯಲ್ಲಿ ಈಗಾಗಲೇ ಪರಿಷ್ಕರಣೆ ಮಾಡಿರುವ ವಿವಿಧ ಸೇವಾ ದರಗಳನ್ನು ಆಡಳಿತ ಮಂಡಳಿಯವರು ಮತ್ತೊಮ್ಮೆ ಪುನರ್ ಪರಿಶೀಲನೆ ಮಾಡಿ ಮರು ಪರಿಷ್ಕರಣೆ ಮಾಡಿ ಶೇ 25% ರಷ್ಟು ಏರಿಕೆ ಮಾಡುವರೇ ಎಂದು ಕೇಳಿಕೊಂಡಿದ್ದಾರೆ.




