Breaking
21 Sep 2026, Mon

15 ದಿನದ ಹಸಿಗೂಸಿನ ಬಾಯಿಗೆ ಕಲ್ಲು ತುಂಬಿ, ತುಟಿಗೆ ಫೆವಿಕ್ವಿಕ್ ಹಾಕಿ ಕಾಡಿನಲ್ಲಿ ಎಸೆದ ಕ್ರೂರಿಗಳು

ರಾಜಸ್ಥಾನ: 15 ದಿನಗಳ ಮಗುವೊಂದರ ಬಾಯಿಯೊಳಗೆ ಕಲ್ಲು ತುಂಬಿ ತುಟಿಗಳನ್ನು ಪೆವಿಕ್ವಿಕ್ ನಿಂದ ಅಂಟಿಸಿ ಕಾಡಿನಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಮಾಂಡಲಗಢ ವಿಧಾನಸಭಾ ಕ್ಷೇತ್ರದ ಬಿಜೋಲಿಯಾ ಪೊಲೀಸ್ ಠಾಣಾ ಅರಣ್ಯ ಪ್ರದೇಶದ ಬಳಿ ನಡೆದಿದೆ.

ವೃದ್ಧರೊಬ್ಬರು ರಸ್ತೆಯ ಪಕ್ಕದ ಕಾಡಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದಾಗ, ಮಗು ಅಳುವ ಧ್ವನಿ ಕೇಳಿಸಿದ್ದು, ಹುಡುಕಾಟ ನಡೆಸಿದಾಗ ಕಲ್ಲುಗಳ ರಾಶಿಯಲ್ಲಿ ಮಗುವೊಂದು ಒದ್ದಾಡುತ್ತಿರುವುದು ಕಂಡುಬಂದಿದೆ.

ಕೂಡಲೇ ಮಗುವನ್ನು ಎತ್ತಿಕೊಂಡು ನೋಡಿದಾಗ ಮಗುವಿನ ತುಟಿಗೆ ಫೆವಿಕ್ವಿಕ್ ನಿಂದ ಅಂಟಿಸಿರುವುದು ಗೊತ್ತಾಗಿದೆ. ಬಳಿಕ ಅವರು ಮಗುವಿನ ಬಾಯಿಯನ್ನು ತೆರೆದು ನೋಡಿದಾಗ ಅದರಲ್ಲಿ ಕಲ್ಲುಗಳನ್ನು ತುರುಕಿರುವುದು ಬೆಳಕಿಗೆ ಬಂದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಬಿಜೋಲಿಯಾ ಪೊಲೀಸರು ಮಗುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಗುವನ್ನು ಭಿಲ್ವಾರಾದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ, ಮಗುವಿನ ಆರೋಗ್ಯ ಪರೀಕ್ಷಿಸಿದ ವೈದ್ಯರು ಮಗುವಿನ ತೂಕ ಕೇವಲ ಮೂರು ಕಿಲೋಗ್ರಾಂಗಳಷ್ಟಿದ್ದು, ತುಂಬಾ ದುರ್ಬಲವಾಗಿದೆ. ಸೋಂಕು ದೇಹದಾದ್ಯಂತ ಹರಡಿದ್ದು, ಮಗುವಿನ ವೈದ್ಯಕೀಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಬಿಜೋಲಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *