ಮಂಗಳೂರು: ಬೈಕ್‌ನಲ್ಲಿ ಸಾಗುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಗರದ ಬೊಂದೇಲ್ ಮೆಸ್ಕಾಂ ಕಚೇರಿ ಬಳಿ ನಡೆದಿದೆ.
ಮೃತರನ್ನು ಬಜಪೆ ಜರಿನಗರ ನಿವಾಸಿ ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಫಹದ್ ಅಹ್ಮದ್ (22) ಎಂದು ಗುರುತಿಸಲಾಗಿದೆ.

ಫಹದ್ ಬೆಳಗ್ಗೆ 8 ಗಂಟೆಯ ಸುಮಾರಿಗೆ ಬಜ್ಪೆಯಿಂದ ತನ್ನ ಬೈಕ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ವೇಳೆ ಬೊಂದೇಲ್ ಬಳಿ ಹಿಂದಿನಿಂದ ಸ್ವಿಫ್ಟ್ ಕಾರೊಂದು ಬಂದಿದ್ದು, ಅದರ ಸೈಡ್ ಮಿರರ್ ಫಹದ್ ಅವರಿಗೆ ತಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಅವರ ಬೈಕ್ ರಸ್ತೆ ಬದಿಯ ಫುಟ್‌ಪಾತ್‌ನಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ಅಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಚಾಲಕ ಕಾರು ಸಮೇತ ಸ್ಥಳದಿಂದ ಪರಾರಿಯಾಗಿದ್ದು, ಘಟನೆಯ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ಬಂದ ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರತ್ಯಕ್ಷದರ್ಶಿಗಳ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಾರಿಯಾಗಿದ್ದ ಕಾರನ್ನು ತೊಕ್ಕೊಟ್ಟುವಿನಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


