ಬೆಂಗಳೂರು: ತನ್ನ ಯೋಗ ಸೆಂಟರ್ ಗೆ ಬರುತ್ತಿದ್ದ ಬಾಲಕಿ, ಯುವತಿಯರು ಸೇರಿದಂತೆ 8 ಮಂದಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಅಡಿಯಲ್ಲಿ ಯೋಗ ಗುರು ನಿರಂಜನಾ ಮೂರ್ತಿಯನ್ನು ರಾಜರಾಜೇಶ್ವರಿ ನಗರದ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ರಾಜರಾಜೇಶ್ವರಿ ನಗರದಲ್ಲಿ ಯೋಗ ಕೇಂದ್ರ ನಡೆಸುತ್ತಿದ್ದ. ನಿಮಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗದಲ್ಲಿ ಹೆಸರು ಬರುವಂತೆ ಮಾಡುತ್ತೇನೆ. ನಿಮಗೆ ಅದರಿಂದ ಸರ್ಕಾರಿ ಕೆಲಸವು ಸಿಗಬಹುದು ಎಂದು ನಂಬಿಸಿ, ಯೋಗ ಸೆಂಟರ್ ಗೆ ಬರುತ್ತಿದ್ದ ಯುವತಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಆರೋಪಿ, ಹದಿನೇಳು ವರ್ಷದ ಬಾಲಕಿ ಮೇಲೆ ಕೂಡ ಅತ್ಯಾಚಾರವೆಸಗಿದ್ದು, ಬಾಲಕಿಯ ದೂರಿನ ಅನ್ವಯ ರಾಜರಾಜೇಶ್ವರಿ ನಗರ ಪೊಲೀಸರು ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದರು. ಆದರೆ ಅತ್ತ ಕೇಸ್ ದಾಖಲಾಗುತ್ತಿದ್ದಂತೆ ಇತ್ತ ಆರೋಪಿ ತಲೆಮರಿಸಿಕೊಂಡಿದ್ದ.

ಸದ್ಯ ಪೊಲೀಸರು ಆತನನ್ನು ಹುಡುಕಿ ಬಂಧಿಸಿದ್ದು, ಈ ಯೋಗ ಗುರುವಿನಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಒಳಗಾಗಿದ್ದರೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಪೊಲೀಸರು ಸೂಚನೆ ನೀಡಿದ್ದಾರೆ ಹಾಗೂ ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.




