ಹಾಸನದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಕ್ಯಾಂಟರ್ ಹರಿದು 9 ಮಂದಿ ಸಾವು

ಹಾಸನ: ಗಣೇಶ ವಿಸರ್ಜನೆ ವೇಳೆ ಕ್ಯಾಂಟರ್ ಹರಿದು 9 ಮಂದಿ ಸಾವನ್ನಪ್ಪಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಸೆ.12 ರಂದು ರಾತ್ರಿ ವೇಳೆ ನಡೆದಿದೆ.

ಘಟನೆಯಲ್ಲಿ ಪ್ರವೀಣ್ ಕುಮಾರ್, ಅಂತಿಮ ಬಿಇ ವಿದ್ಯಾರ್ಥಿ, ಬಳ್ಳಾರಿ, ರಾಜೇಶ ಬಿನ್ ಮೂರ್ತಿ (17), ಈಶ್ವರ ಬಿನ್ ರವಿಕುಮಾರ (17), ಗೋಕುಲ ಬಿನ್ ಸಂಪತ್ ಕುಮಾರ್ (17), ಕುಮಾರ ಬಿನ್ ತಿಮ್ಮಯ್ಯ (25 ), ಪ್ರವೀಣ ಬಿನ್ ಹನುಮಯ್ಯ (25), ಮಿಥುನ್ ಬಿನ್ ವಿಜಯ್ (23), ಸುರೇಶ ಬಿನ್ ರಮೇಶ, ಪ್ರಭಾಕರ್ (55) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. 20 ಗಾಯಾಳುಗಳಿಗೆ ಹಾಸನದ ಹಿಮ್ ನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ ಮೂವರು ಐಸಿಯುನಲ್ಲಿದ್ದಾರೆ. 7 ಮಂದಿ ಗಾಯಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮೊಸಳೆಹೊಸಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ 25 ವರ್ಷಗಳಿಂದ ಗ್ರಾಮಸ್ತರು ಗಣಪತಿ ಕೂರಿಸುತ್ತಿದ್ದಾರೆ. ಶುಕ್ರವಾರ ಆರ್ಕೆಸ್ಟ್ರಾ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಆರ್ಕೆಸ್ಟ್ರಾ ಬಳಿಗೆ ಸಾವಿರಾರು ಮಂದಿ ಬರುತ್ತಿದ್ದರು. ಈ ವೇಳೆ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಯಮಸ್ವರೂಪಿ ಟ್ರಕ್ ಹರಿದು ಈ ದುರಂತ ಸಂಭವಿಸಿದೆ.

ಹಾಸನದಿಂದ ಹೊಳೆನರಸೀಪುರದ ಕಡೆಗೆ ಮಹಾರಾಷ್ಟ್ರಕ್ಕೆ ಸೇರಿದ ಟ್ರಕ್ ಹೋಗುತ್ತಿತ್ತು. ಈ ವೇಳೆ ಅಡ್ಡ ಬಂದ ಬೈಕ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ವಾಹನ ನುಗ್ಗಿ ಅವಘಡ ಸಂಭವಿಸಿದೆ ಅನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮೃತರ ಕುಟುಂಬಗಳಿಗೆ 5 ಲಕ್ಷ ರೂ, ಪರಿಹಾರ ಘೋಷಣೆ ಮಾಡಿದ್ದಾರೆ.

Leave a Reply

Your email address will not be published. Required fields are marked *