Breaking
22 Mar 2026, Sun

ಮಂಗಳೂರಿನಲ್ಲಿ ಮಗು ಮಾರಾಟ ಜಾಲ ಪತ್ತೆ; ಮೂವರು ಆರೋಪಿಗಳ ಬಂಧನ

ಮಂಗಳೂರು: ನಗರದ ಕಂಕನಾಡಿಯಲ್ಲಿರುವ ಪ್ರಖ್ಯಾತ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಮಗು ಮಾರಾಟ ಜಾಲದ ಆರೋಪ ಕೇಳಿ ಬಂದಿದ್ದು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳದ ವೈದ್ಯ ಡಾ.ಸೋಮೇಶ್ ಸೊಲೊಮನ್, ಪಂಪ್ ವೆಲ್ ನಲ್ಲಿರುವ ಪಿಜಿಯೊಂದರ ಮಾಲಕಿ, ವಿಜಯಲಕ್ಷ್ಮೀ ಯಾನೆ ವಿಜಯ, ನವನೀತ್ ನಾರಾಯಣ ಬಂಧಿತ ಆರೋಪಿಗಳು.

ಕಾಪುವಿನ ಹೇರೂರು ಗ್ರಾಮದ ಕಲ್ಲುಗುಡ್ಡೆ ನಿವಾಸಿ ಪ್ರಭಾವತಿ ಮತ್ತು ಆಕೆಯ ಪತಿ ರಮೇಶ್ ಮೂಲ್ಯ ದಂಪತಿಗಳು 4 ದಿನದ ಶಿಶುವನ್ನು ಪೋಷಣ್ ಟ್ರ್ಯಾಕರ್ ನಲ್ಲಿ ರಿಜಿಸ್ಟರ್ ಮಾಡಲು ಅಂಗನವಾಡಿಗೆ ಕರೆದುಕೊಂಡು ಹೋಗಿದ್ದಾರೆ.

ಈ ವೇಳೆ ಪರಿಶಿಲಿಸಿದಾಗ ಮಗು ದಂಪತಿಗಳಿಗೆ ಸೇರಿದ್ದು ಅಲ್ಲ ಎಂಬುದು ಅಂಗನವಾಡಿ ಕಾರ್ಯಕರ್ತೆಗೆ ಅನುಮಾನ ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವಿವಾಹಿತ ಮಹಿಳೆಗೆ ಹೆರಿಗೆಯಾಗಿದ್ದು, ಅವರಿಗೆ ಹಣ ನೀಡಿ ಆಸ್ಪತ್ರೆಯ ಮುಖಾಂತರ ಮಗುವನ್ನು ಪಡೆದುಕೊಂಡು ಬಂದಿರುವ ಮಾಹಿತಿಯನ್ನು ದಂಪತಿಗಳು ತಿಳಿಸಿದ್ದಾರೆ.

ಬಳಿಕ ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಭಾವತಿಯವರ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಆ.03 ರಂದು ಜನಿಸಿದ ಮಗುವನ್ನು ಮಂಗಳೂರಿನ ಕುಲಾಸೋ ಆಸ್ಪತ್ರೆಯ ವೈದ್ಯರು ತಮಗೆ ನೀಡಿದ್ದಾರೆ. ಮತ್ತು ಪ್ರಭಾವತಿರವರ ಚಿಕ್ಕಮ್ಮನ ಮಗಳು ಪ್ರಿಯಾಂಕರವರು ಮಗುವಿನ ಹೆರಿಗೆಯಾಗುವ ಬಗ್ಗೆ ವಿಚಾರವನ್ನು ತಿಳಿಸಿ ಆಸ್ಪತ್ರೆಯ ವೈದ್ಯರ ಮುಖಾಂತರ ರೂ 4.5 ಲಕ್ಷ ಹಣವನ್ನು ನೀಡಿ ಮಗುವನ್ನು ಪಡೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಸತ್ಯ ಒಪ್ಪಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *