ಮಂಗಳೂರು: ನಗರದ ಫ್ಲ್ಯಾಟ್ ವೊಂದರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಾಣೆಯಾಗಿದ್ದು ಕೆಲಸದಾಕೆಯ ಮೇಲೆ ಸಂಶಯ ವ್ಯಕ್ತವಾಗಿದೆ.
ಈ ಫ್ಲ್ಯಾಟ್ ನಲ್ಲಿದ್ದ ಮಾಲಕ ಜಗದೀಶ್ ಮತ್ತು ಅವರ ಮಕ್ಕಳು ವಿದೇಶದಲ್ಲಿ ಉದ್ಯೋಗದಲ್ಲಿದ್ದು ಅವರ ಪತ್ನಿ ಹಾಗೂ ಆಕೆಯ ಅಕ್ಕನ ಮಗ ವಾಸವಾಗಿದ್ದರು. ಪತ್ನಿಯ ಆರೋಗ್ಯ ಸರಿ ಇಲ್ಲದ ಹಿನ್ನೆಲೆಯಲ್ಲಿ ಮಹಿಳೆಯೋರ್ವಳನ್ನು ಮನೆ ಕೆಲಸಕ್ಕೆಂದು ಇಟ್ಟುಕೊಂಡಿದ್ದರು. ಆದ್ರೆ ಮನೆ ಆಕೆ 2025ರ ಜು.21ರಿಂದ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದಳು.

ಪೋನ್ ಕರೆ ಕೂಡ ಸ್ವೀಕರಿಸುತ್ತಿರಲಿಲ್ಲ. ಬಳಿಕ ಜಗದೀಶ್ ಅವರ ಪತ್ನಿಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ತಾಯಿ ಮನೆಗೆ ಹೋಗಿ ಉಳಿದುಕೊಂಡಿದ್ದರು. ಫ್ಲ್ಯಾಟ್ನಲ್ಲಿ ಆಕೆಯ ಅಕ್ಕನ ಮಗ ಮಾತ್ರ ಇದ್ದರು. ಆ.15ರಂದು ಫ್ಲ್ಯಾಟ್ನಲ್ಲಿ ಚಿನ್ನಾಭರಣಗಳನ್ನು ಇಟ್ಟಿದ್ದ ಕರಡಿಗೆಯನ್ನು ತರುವಂತೆ ತನ್ನ ಅಕ್ಕನ ಮಗನಲ್ಲಿ ಹೇಳಿದರು.

ಅದರಂತೆ ಆತ ಕರಡಿಗೆಯನ್ನು ತೆಗೆದು ನೋಡಿದಾಗ ಅದರಲ್ಲಿದ್ದ ಚಿನ್ನದ ಬಳೆಗಳು, ಬ್ರಾಸ್ಲೆಟ್, ಒಲೆ, ಚಿನ್ನದ ಉಂಗುರಗಳು ಸೇರಿದಂತೆ ಒಟ್ಟು 9.46 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಮನೆ ಕೆಲಸದಾಕೆ ಹೇಳದೆ ಕೇಳದೆ ಕೆಲಸ ಬಿಟ್ಟಿದ್ದರಿಂದ ಮತ್ತು ಆ ಬಳಿಕದ ಅವಧಿಯಲ್ಲಿ ಮೊಬೈಲ್ ಕರೆಗಳನ್ನು ಸ್ವೀಕರಿಸದೇ ಇರುವುದರಿಂದ ಹಾಗೂ ಆಕೆಯ ಬಳಿ ಫ್ಲ್ಯಾಟ್ನ ಕೀ ಇದ್ದುದರಿಂದ ಆಕೆಯೇ ಚಿನ್ನಾಭರಣ ಕಳವು ಮಾಡಿರುವ ಸಂಶಯವಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


