ಬಂಟ್ವಾಳ: ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಚೌತಿ ಉತ್ಸವ ಕಾರ್ಯಕ್ರಮವು ಆ. 26 ರಂದು ನಡೆಯಿತು.

ಇದೇ ವೇಳೆ ಗಣಯಾಗ, ಕಲಶಾಭಿಷೇಕ ಲಕ್ಷ್ಮೀ ಸಹಿತ ದಶಭುಜ ಮಹಾಗಣಪತಿ ದೇವರ ವಿಗ್ರಹಕ್ಕೆ ಹಿರಿಯ ಸ್ಯಾಕ್ಸೋಫೋನ್ ವಾದಕ ಕೆ. ಬಾಬು ಸಪಲ್ಯ ವಗ್ಗ ಇವರಿಂದ ಪ್ರಭಾವಳಿ ಸಮರ್ಪಣೆ ನಡೆಯಿತು. ಮಧ್ಯಾಹ್ನ ದೇವರಿಗೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಧರ್ಮದರ್ಶಿ ಕೆ. ಎಸ್. ಪಂಡಿತ್, ಕಾರಿಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಪಿಲಾತಬೆಟ್ಟು ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಎಂ. ಬೂಬ ಸಪಲ್ಯ ಮುಂಡಬೈಲು, ಪುರಸಭೆ ಸದಸ್ಯ ಜಗದೀಶ್ ಕುಂದರ್, ಭಜನಾ ಸಮಿತಿ ಅಧ್ಯಕ್ಷ ಜಯ ಪೂಜಾರಿ, ಪ್ರಮುಖರಾದ ಮೋಹನ್ ಕೆ. ಶ್ರೀಯಾನ್ ರಾಯಿ, ಚಿದಾನಂದ ನಾಯ್ಕ್ ಪಿಲಿಂಗಾಲು ಮತ್ತಿತರರು ಉಪಸ್ಥಿತರಿದ್ದರು.




