ಪುಂಜಾಲಕಟ್ಟೆ : ಬಂಟ್ವಾಳ ತಾಲೂಕಿನ ಮಧ್ವ ಯಕ್ಷಕೂಟದ ವತಿಯಿಂದ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ತುಳು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಾಂಗಣದಲ್ಲಿ ಆ.24ರಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಳ್ಳಮಂಜ ಉದ್ಯಮಿ ಜಯಪ್ರಕಾಶ್ ಸಂಪಿಗೆತ್ತಾಯ ಅವರು ಕರಾವಳಿಯ ಗಂಡು ಕಲೆಯಾದ ಯಕ್ಷಗಾನವನ್ನು ಜಗದಗಲ ಪಸರಿಸುವಲ್ಲಿ ಯಕ್ಷಗಾನಾಸಕ್ತರ ಕೊಡುಗೆ ಅನನ್ಯ.
ಈ ನಿಟ್ಟಿನಲ್ಲಿ ಭಾಸ್ಕರ ಶೆಟ್ಟಿ ಅವರ ನೇತೃತ್ವದ ಯಕ್ಷಕೂಟ ಮಧ್ವದ ಕಾರ್ಯ ಶ್ಲಾಘನೀಯವಾಗಿದ್ದು, ಯಕ್ಷಗಾನಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು.

ಮಧ್ವ ಯಕ್ಷ ಕೂಟ ಅಧ್ಯಕ್ಷ ಭಾಸ್ಕರ ಶೆಟ್ಟಿ ಅವರು ಪ್ರಸ್ತಾವಿಸಿ ಮಾತನಾಡಿ, ಗಣಪತಿಯ ಕುರಿತ ತುಳುನಾಡಿನ ಪಾಡ್ದನ ಪ್ರಪಂಚದಲ್ಲಿ ಜನಜನಿತವಾಗಿರುವ ಬಾಮಕುಮಾರ ಸಂಧಿ ಆಧಾರಿತ ಯಕ್ಷಗಾನ ಪ್ರಸಂಗವನ್ನು ಹಿರಿಯ ಯಕ್ಷಗಾನ ಕಲಾವಿದರಾದ ಸದಾಶಿವ ಆಳ್ವ ತಲಪಾಡಿ ಅವರು ರಚಿಸಿದ್ದು, ಗಣೇಶ ಚತುರ್ಥಿ ಪ್ರಯುಕ್ತ ಬಾಮುಲ್ಲ ಭಾಮ ಕುಮಾರೆ ತಾಳಮದ್ದಳೆಯ ಪ್ರಥಮ ಪ್ರಯೋಗವನ್ನು ನಡೆಸಲು ಅವಕಾಶ ಒದಗಿರುವುದು ದೇವರ ಅನುಗ್ರಹವಾಗಿದೆ ಎಂದರು.

ಈ ಸಂದರ್ಭದಲ್ಲಿ ಪಸಂಗಕರ್ತೃ ಸದಾಶಿವ ಆಳ್ವ ತಲಪಾಡಿ, ಭಾಗವತ ದೇವೀಪ್ರಸಾದ ಆಳ್ವ ತಲಪಾಡಿ, ದೇವಸ್ಥಾನದ ಆಡಳಿತ ಮಂಡಳಿ ಟ್ರಸ್ಟ್ ಅಧ್ಯಕ್ಷ ನಾಗೇಶ್ ಪ್ರಭು, ಪುರಿಯ ಶ್ರೀ ದೇವಿ ಭಜನ ಮಂದಿರದ ಅಧ್ಯಕ್ಷ ರಾಜಾರಾಮ ಶೆಟ್ಟಿ, ಹಿರಿಯ ಯಕ್ಷಗಾನ ಅರ್ಥಧಾರಿ ಪಾತಿಲ ತಿಮ್ಮಪ್ಪ ಶೆಟ್ಟಿ, ಮಡಂತ್ಯಾರು ಉದ್ಯಮಿ ವಿಷ್ಣು ಮೂರ್ತಿ ಬಾಳಿಗ, ಆರಂಬೋಡಿ ಗ್ರಾ.ಪಂ.ಅಧ್ಯಕ್ಷ ಸುರೇಂದ್ರ ಶೆಟ್ಟಿ, ಕಾವಳಪಡೂರು ಗ್ರಾ.ಪಂ.ಸದಸ್ಯ ಚಂದ್ರಶೇಖರ ಕರ್ಣ, ಯಕ್ಷಕೂಟದ ಗೌರವ ಸಲಹೆಗಾರ ಸಂಜೀವ ಶೆಟ್ಟಿ ಪಂಜಿಕಲ್ಲು, ಉಪಾಧ್ಯಕ್ಷ ರತ್ನದೇವ್ ಪುಂಜಾಲಕಟ್ಟೆ, ಪದಾಧಿಕಾರಿಗಳಾದ ಗಣನಾಥ ಶೆಟ್ಟಿ, ಭಾನುಮತಿ ಶೆಟ್ಟಿ, ಸುಜಾತ ಶೆಟ್ಟಿ, ಮೋಹನ ಅಮೀನ್ ಮಧ್ವ, ಕುಶಲ ರಘುರಾಮ ಶೆಟ್ಟಿ, ಯಕ್ಷಗಾನ ಹಿಮ್ಮೇಳ ಕಲಾವಿದರಾದ ಪ್ರಶಾಂತ್ ಶೆಟ್ಟಿ ವಗೆನಾಡು, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಮುಮ್ಮೇಳ ಕಲಾವಿದರಾದ ಪ್ರಶಾಂತ್ ಸಿ.ಕೆ., ಪ್ರಸಾದ ಸವಣೂರು, ಗುರುತೇಜಕೃಷ್ಣ ಒಡಿಯೂರು ಮತ್ತಿತರರು ಉಪಸ್ಥಿತರಿದ್ದರು.
ಯಕ್ಷಗಾನ ಕಲಾವಿದೆ ಸಾಯಿಸುಮಾ ಎಂ. ನಾವಡ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬಾಮುಲ್ಲ ಬಾಮ ಕುಮಾರೆ ಯಕ್ಷಗಾನ ತಾಳಮದ್ದಳೆ ನಡೆಯಿತು.



