ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಪೊಲೀಸ್ ಇಲಾಖೆಯ ಮೂಲಕ ಹಬ್ಬಗಳ ಆಚರಣೆಗೆ ಮನಸೋ-ಇಚ್ಛೆ ನಿಯಮಗಳನ್ನು ಹೇರಿ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ಹುನ್ನಾರ ಮಾಡುತ್ತಿದೆ ಎಂದು ಸಂಸದ ಕ್ಯಾ|ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಸೇರಿದಂತೆ ಹಲವು ಹಬ್ಬದ ಆಚರಣೆ ಸಂದರ್ಭ ಧ್ವನಿವರ್ಧಕ ಬಳಸಲು ಪೊಲೀಸರು ನಿರ್ಬಂಧ ವಿಧಿಸಿ ತೊಂದರೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದರು, ತುಳುನಾಡು ದೈವಾರಾಧನೆ, ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳಿಗೆ ಹೆಸರುವಾಸಿ. ಯಕ್ಷಗಾನ, ಬ್ರಹ್ಮಕಲಶದಂಥ ಕಾರ್ಯಕ್ರಮಗಳು ಸದಾ ನಡೆಯುತ್ತವೆ. ಆದರೆ, ಪೊಲೀಸರು ಇತ್ತೀಚೆಗೆ ಹಲವೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಸಿದ್ದಕ್ಕೆ ಆಯೋಜಕರು ಹಾಗೂ ಧ್ವನಿವರ್ಧಕದವರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿದರು.

ಹಬ್ಬ-ಹರಿದಿನಗಳನ್ನು ಸಂತೋಷ, ಭಕ್ತಿ-ಭಾವದಿಂದ ಆಚರಿಸುತ್ತಿರ ಬೇಕಾದರೆ, ಏಕಾಏಕಿ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ರೀತಿಯ ನಿಯಮಗಳನ್ನು ರೂಪಿಸಲು ಸೂಚಿಸಿದ್ದು ಯಾರು? ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಧ್ವನಿವರ್ಧಕ ಬಳಕೆಗೆ ಕೆಲವು ಷರತ್ತುಗಳನ್ನು ವಿಧಿಸಿದ್ದರೂ ಹಬ್ಬಗಳ ಆಚರಣೆಗೆ ಅಡ್ಡಿ ಮಾಡುತ್ತಿರಲಿಲ್ಲ. ಹಾಗಾದರೆ, ಈ ಸರಕಾರವೇ ಹಿಂದೂಗಳ ಧಾರ್ಮಿಕ ಆಚರಣೆಗೆ ನಿಯಮಗಳ ಮೂಲಕ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದ್ದಾರೆ.

ಮುಂದಿನ ಚೌತಿ, ಹುಲಿವೇಷ, ನವರಾತ್ರಿ ಯಂಥ ಹಬ್ಬದ ಆಚರಣೆಗೂ ಸಾಕಷ್ಟು ತೊಂದರೆಯಾಗಲಿದೆ. ಹೀಗಿರುವಾಗ, ಸರಕಾರವು ಕೂಡಲೇ ಮಧ್ಯಪ್ರವೇಶಿಸಿ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಹಬ್ಬದ ಕಾರ್ಯಕ್ರಮ ನಡೆಸುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ.



