ಬೈಂದೂರು: ಕಾರವಾರದಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಅಮಲುಭರಿತ ಚಾಕಲೇಟ್ ನೀಡಿ 4.86 ಲಕ್ಷ ಮೌಲ್ಯದ ಚಿನ್ನಾಭರಣ ನಗದು ದೋಚಿದ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ ನಿವಾಸಿ ಹರೀಶ ಅವರು ಕಾರವಾರದಿಂದ ಮಂಗಳೂರಿಗೆ ರೈಲಿನಲ್ಲಿ ಬರುವ ಸಂದರ್ಭದಲ್ಲಿ ಭಟ್ಕಳದಲ್ಲಿ ರೈಲು ಏರಿದ್ದ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿ ತನ್ನ ಪರಿಚಯ ಮಾಡಿಕೊಂಡು ಚಾಕಲೇಟ್ ನೀಡಿದ್ದನು.

ಅದನ್ನು ಸೇವಿಸಿದ ಬಳಿಕ ಗಾಢ ನಿದ್ದೆಗೆ ಜಾರಿದ ಹರೀಶ್ ಬೆಳಗ್ಗೆ ಎದ್ದು ನೋಡುವಾಗ ಕುತ್ತಿಗೆಯಲ್ಲಿದ್ದ ಸುಮಾರು 28 ಗ್ರಾಂ ತೂಕದ 2,35,000 ರೂಪಾಯಿ ಬೆಲೆಬಾಳುವ ಸರ, 8 ಗ್ರಾಂ ತೂಕದ 70,000 ರೂಪಾಯಿ ಬೆಲೆಯ ಉಂಗುರ, ವಾಚ್, ಮೊಬೈಲ್ ಮತ್ತು ಬ್ಯಾಗಿನಲ್ಲಿದ್ದ 1,45,000 ರೂಪಾಯಿ ನಗದು ಸಹಿತ ಒಟ್ಟು 4,86,500 ರೂಪಾಯಿ ಮೌಲ್ಯದ ವಸ್ತುಗಳು ಕಳವಾಗಿದ್ದವು.

ಈ ಕುರಿತು ಅವರು ಅಪರಿಚಿತ ವ್ಯಕ್ತಿಯ ವಿರುದ್ಧ ಬೈಂದೂರು ಪೊಲೀಸರಿಗೆ ದೂರು ನೀಡಿದ್ದಾರೆ.




