Breaking
24 Mar 2026, Tue

ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಯಾರೇ ಕಾರ್ಯಕ್ರಮ ಮಾಡಲಿ ಅವರೆಲ್ಲ ನಮ್ಮವರು ಎಂಬ ಭಾವನೆ ಮೂಡಿದಾಗ ದೇವಸ್ಥಾನ ಅಭಿವೃದ್ಧಿಯಾಗಲು ಸಾಧ್ಯ : ಈಶ್ವರ ಭಟ್ ಪಂಜಿಗುಡ್ಡೆ

ಪುತ್ತೂರು: ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಯಾರೇ ಕಾರ್ಯಕ್ರಮ ಮಾಡಲಿ ಅವರೆಲ್ಲ ನಮ್ಮವರು ಎಂಬ ಭಾವನೆ ಮೂಡಿದಾಗ ದೇವಸ್ಥಾನ ಅಭಿವೃದ್ಧಿಯಾಗಲು ಸಾಧ್ಯ ಎಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಹೇಳಿದರು.

ಸಮರ್ಪಣಾ ಮಹಿಳಾ ಸೇವಾ ಸಂಸ್ಥೆ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜೆ ಸಮಿತಿ ವತಿಯಿಂದ ಹಾಗೂ ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ಮತ್ತು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ದೇವಳದ ನಟರಾಜ ವೇದಿಕೆಯಲ್ಲಿ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇವತ್ತು ಶಕುಂತಳಾ ಶೆಟ್ಟಿಯವರ ನೇತೃತ್ವದಲ್ಲಿ ವರಮಹಾಲಕ್ಷ್ಮೀ ಪೂಜೆ ನಡೆಯುತ್ತಿದೆ. ನಾಳಿದ್ದು ಇನ್ನೊಂದು ಸಂಘಟನೆಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ, ಚೌತಿ, ಕಂಬಳವೋತ್ಸವ, ಪಿಲಿಗೊಬ್ಬು, ಶ್ರೀನಿವಾಸ ಕಲ್ಯಾಣೋತ್ಸವ ನಡೆಯುತ್ತದೆ. ಹೀಗೆ ಹಲವು ಸಂಘಟನೆ ಬೇರೆ ಬೇರೆ ಆಗಿರಬಹುದು. ಆದರೆ ಇವರೆಲ್ಲರೂ ನಮ್ಮವರು ಎಂಬ ಭಾವನೆ ಮೂಡಿದಾಗ ಮಾತ್ರ ದೇವಸ್ಥಾನ ಅಭಿವೃದ್ಧಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ನಾವು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪೂರ್ವಜರು ಮಾಡಿದ ಪುಣ್ಯದ ಫಲ. ಇಂತಹ ಸಂಘಟನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಾವು ಬೆನ್ನೆಲುಬಾಗಿ ನಿಂತು ಕೆಲಸ ಮಾಡುತ್ತೇವೆ.

ನಾವು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧಿಕಾರ ಸ್ವೀಕರಿಸಿ 7 ತಿಂಗಳಲ್ಲಿ ಭಕ್ತರ ಆರ್ಶೀವಾದದಿಂದ ಹಲವಾರು ಬದಲಾವಣೆ ತಂದಿದ್ದೇವೆ. ಮಹಾಲಿಂಗೇಶ್ವರ ದೇವರ ಜಾಗವನ್ನು ಮರು ದೇವಸ್ಥಾನಕ್ಕೆ ಸ್ವಾಧೀನಪಡಿಸುವುದಾಗಿರಬಹುದು, ಅನ್ನಪ್ರಸಾದ ವಿತರಣೆಯಲ್ಲಿ, ಶುದ್ದ ಎಳ್ಳೆಣ್ಣೆ, ಶುದ್ಧ ಕುಂಕುಮ, ಶುದ್ಧ ತುಪ್ಪ ಸಮರ್ಪಣೆ ಆಗಿರಬಹುದು, ಇವೆಲ್ಲವೂ ಇವತ್ತು ದೇವಳದಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದೆ. ದೈವಜ್ಞರ ಸಲಹೆಯಂತೆ ರಕ್ತೇಶ್ವರಿ ದೇವಿಯನ್ನು ದೇವಸ್ಥಾನದ ಒಳಗೆ ತಂದ ಬಳಿಕ ಮಹಾಲಿಂಗೇಶ್ವರ ದೇವಸ್ಥಾನದ ಚಿತ್ರಣವೇ ಬದಲಾಯಿತು.

ಧರ್ಮಸ್ಥಳ, ಸುಬ್ರಹ್ಮಣ್ಯ, ಸೌತಡ್ಕ ಕ್ಷೇತ್ರದಲ್ಲಿ ಹೊರಗಿನಿಂದ ಬಂದು ಭಕ್ತರು ಕಾಣಿಕೆ ಹಾಕುತ್ತಾರೆ. ಆದರೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೊರಗಿನಿಂದ ಬರುವುದಿಲ್ಲ. ನಮ್ಮವರೇ ನಮ್ಮ ಊರಿನವರೇ ಬಂದು ದೇಣೀಗೆ ನೀಡಿ ದೇವಸ್ಥಾನವನ್ನು ವ್ಯವಸ್ಥಿತ ರೂಪದಲ್ಲಿ ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಮರ್ಪಣ ಮಹಿಳಾ ಸೇವಾ ಸಂಸ್ಥೆಯ ಗೌರವಾಧ್ಯಕ್ಷೆ ಮತ್ತು ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರು ಮಾತನಾಡಿ, ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವರಮಹಾಲಕ್ಷ್ಮೀ ಪೂಜೆಯನ್ನು ನಾವು ಶುರು ಮಾಡಿ ಇವತ್ತಿಗೆ 18 ವರ್ಷ ಆಗಿದೆ. ಎಲ್ಲಾ ಕಾರ್ಯಕ್ರಮಗಳು ಆ ದೇವರ ಆಶೀರ್ವಾದಂತೆ ನಡೆಯುತ್ತಿದೆ.

ಯಾಕೆಂದರೆ ಕಂಬಳಕ್ಕೂ ಅಪವಾದ ಇತ್ತು ಆ ಅಪವಾದ ಹೋಗಿ ಈಗ ಬಹಳಷ್ಟು ಜನರು ಕಂಬಳಕ್ಕೆ ಕರೆಯದವರು ಕೂಡಾ ಬಂದು ಅಲ್ಲಿ ಕೂತು ದೊಡ್ಡ ಹುದ್ದೆಗೆ ಹೋಗುತ್ತಿದ್ದಾರೆ. ವರಮಹಾಲಕ್ಷ್ಮೀ ಪೂಜೆಗೂ ಅದೆ ಕಲಂಕ ಆಗಿತ್ತು. ಅದೆಲ್ಲವನ್ನು ಮೀರಿ ಯಾರೆಲ್ಲಾ ಪೂಜೆಯಲ್ಲಿ ಭಾಗವಹಸಿದ್ದಾರೋ, ಪೂಜೆ ಮಾಡಿಸಿದ್ದಾರೋ ಅವರೆಲ್ಲ ಇವತ್ತು ಸಮಾಜದ ಉನ್ನತ ಹುದ್ದೆಗೆ ಹೋಗಿದ್ದಾರೆ. ಅಂತಹ ಶಕ್ತಿ ವರಮಹಾಲಕ್ಷ್ಮೀ ಪೂಜೆಗಿದೆ. ವೇ ಮೂ ಹರಿಪ್ರಸಾದ್ ವೈಲಾಯ ಅವರು ಕಳೆದ ಇಲ್ಲಿ ವರಮಹಾಲಕ್ಷ್ಮೀ ಪೂಜೆ ಆರಂಭದಿಂದಲೇ ಪೌರೋಹಿತ್ವ ಮಾಡುತ್ತಿದ್ದಾರೆ ಎಂದರು.

ಮಂಗಳೂರು ಶ್ರೀನಿವಾಸ ಕಾಲೇಜಿನ ಉಪನ್ಯಾಸಕಿ ಡಾ.ವೀಣಾ ಸಂತೋಷ್ ರೈ ಮಾತನಾಡಿ ,ದಿನ ನಿತ್ಯದ ಜೀವನದಲ್ಲಿ ಒಳ್ಳೆಯ ಸಂಸ್ಕೃತಿಯನ್ನು ಅಳವಡಿಸುವ ಕೆಲಸ ಮಾಡಬೇಕು. ಜೀವನದ ಎಲ್ಲಾ ದಿನವನ್ನು ಉತ್ತಮ ದಿನವನ್ನಾಗಿ ನೋಡಬೇಕು. ಇಂತಹ ಸಂದರ್ಭದಲ್ಲಿ ನಮಗೆ ಧಾರ್ಮಿಕ ಉಪನ್ಯಾಸಕ್ಕಿಂತ ನಮ್ಮ ಧಾರ್ಮಿಕತೆಯಲ್ಲಿ ಜೀವನದ ಪಾಠ ಬಹಳ ಮುಖ್ಯ ಎಂದ ಅವರು ನಮ್ಮ ಹಬ್ಬಗಳು ಸೀಮಿತವಾಗಬಾರದು, ನಮ್ಮೆಲ್ಲ ಸಂಸ್ಕಾರ ಆಚಾರ ವಿಚಾರಗಳನ್ನು ಮುಂದಿನ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.

ಸಭಾ ಕಾರ್ಯಕ್ರಮದ ಬಳಿಕ ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆಯ ಮಹಾಪೂಜೆ ನಡೆಯಿತು.ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ರಕ್ಷಾ ಉಜ್ವಲ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಕೃಷ್ಣವೇಣಿ,ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಸುಭಾಶ್ ರೈ ಬೆಳ್ಳಿಪ್ಪಾಡಿ, ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಶುಭಮಾಲಿನಿ ಮಲ್ಲಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ನಯನಾ ರೈ, ಸಮರ್ಪಣ ಮಹಿಳಾ ಸೇವಾ ಸಂಸ್ಥೆಯ ಅಧ್ಯಕ್ಷೆ ಗಂಗಾರತ್ನ ವಿ ರೈ,ಸ್ವರ್ಣಲತಾ ಹೆಗ್ಡೆ, ಶಾರದಾ ಅರಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *