ವಿಟ್ಲ: ವಿಟ್ಲ ಬ್ರಹ್ಮ ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ವಿಟ್ಲ ಪೊನ್ನೊಟ್ಟು ಬ್ರಹ್ಮ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಶನಿವಾರ ನಡೆಯಿತು.
ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ್ ಪಿ. 2023-2024 ರ ಸಾಲಿನ ವಾರ್ಷಿಕ ವರದಿ ಮಂಡಿಸಿದರು.
ಆರ್ಥಿಕ ವರ್ಷದ ಲೆಕ್ಕ ಪರಿಶೋಧಕರ ವರದಿ ಮಂಡಿಸಲಾಯಿತು. ಸಂಘವು ಕಳೆದ ಸಾಲಿನಲ್ಲಿ 87,70,06,127.76 ರೂ. ವ್ಯವಹಾರ ನಡೆಸಿ 40,05,284.56 ರೂ.ನಿವ್ವಳ ಲಾಭ ಗಳಿಸಿದೆ.ಸಂಘವು ಆಡಿಟ್ ವರ್ಗೀಕರಣದಲ್ಲಿ ‘ಎ’ ಶ್ರೇಣಿ ಪಡೆದಿದ್ದು, ಇದೇ ಸಂದರ್ಭದಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಿಸಲಾಯಿತು. ಸಭೆಯಲ್ಲಿ ಸಂಘದ ಸದಸ್ಯರ ಕುಟುಂಬದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ವಿದ್ಯಾರ್ಥಿ ವೇತನ ನೀಡಲಾಯಿತು.
ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಡಾ.ಗೀತಪ್ರಕಾಶ್, ರಾಘವ ಪೂಜಾರಿ, ರಮೇಶ್ ಕುಮಾರ್, ಜಗದೀಶ ವಿ., ಅಭಿಜಿತ್ ಜೆ, ರವಿ ಬಿ.ಕೆ, ಮಾಧವ ಪಿ., ಶ್ರೀಧರ್ ಬಿ., ವನಿತಾ ಚಂದ್ರಹಾಸ, ಪುಷ್ಪಾ ಎಸ್. ಉಪಸ್ಥಿತರಿದ್ದರು.ಸರಿತಾ ರೂಪರಾಜ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಬಾಬು ಕೆ.ವಿ ಸ್ವಾಗತಿಸಿದರು. ನಿರ್ದೇಶಕ ಸಂಜೀವ ಪೂಜಾರಿ ಎಂ. ವಂದಿಸಿದರು. ಸಂಘದ ಪುಣಚ ಶಾಖಾ ಸಿಬ್ಬಂದಿ ಜಗನ್ನಾಥ ಪುಣಚ ಕಾರ್ಯಕ್ರಮ ನಿರೂಪಿಸಿದರು.