ಮಂಗಳೂರು: ಉದ್ಯಮಿ ಮತ್ತು ಶ್ರೀಮಂತ ವ್ಯಕ್ತಿಗಳಿಗೆ ಕೋಟ್ಯಂತರ ರೂ. ವಂಚಿಸಿದ ಆರೋಪಿಯನ್ನು ಪೊಲೀಸರು ಜುಲೈ 17ರಂದು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಜಪ್ಪಿನಮೊಗರು ನಿವಾಸಿ ರೋಶನ್ ಸಲ್ಡಾನ(45) ಎಂದು ಗುರುತಿಸಲಾಗಿದೆ.

ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಎಸಿಪಿ ರವೀಶ್ ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ರೋಶನ್ ಸಲ್ಡಾನ ಉದ್ಯಮಿಯೆಂದು ಹೇಳಿಕೊಂಡು ಹೊರರಾಜ್ಯ, ಹೊರಜಿಲ್ಲೆಯ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿ ಜಾಗದ ವ್ಯವಹಾರದ ಜೊತೆಗೆ ಸಾಲ ನೀಡುವುದಾಗಿ ಹೇಳಿ ನಂಬಿಸುತ್ತಿದ್ದ. ಈ ರೀತಿಯಾಗಿ ಆರೋಪಿ ಕೇವಲ 3 ತಿಂಗಳಲ್ಲೇ 45 ಕೋಟಿ ರೂ. ವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಕಳೆದ ಅನೇಕ ವರ್ಷಗಳಿಂದ 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಉದ್ಯಮಿ ಹಾಗೂ ಶ್ರೀಮಂತ ವ್ಯಕ್ತಿಗಳನ್ನು ತನ್ನ ಮೋಸದ ಬಲೆಗೆ ಬೀಳಿಸುತ್ತಿದ್ದ ಆರೋಪಿ ತನ್ನ ಜಪ್ಪಿನಮೊಗರುವಿನ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ನಡೆಸುತ್ತಿದ್ದ. ಈತ 5ರಿಂದ 100 ಕೋಟಿ ರೂ. ವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಕಳೆದ ಅನೇಕ ವರ್ಷಗಳಿಂದ 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ .

ಆರೋಪಿಯು ತನ್ನ ಮೋಸದ ಬಲೆಗೆ ಬಿದ್ದವರಿಂದ 50 ಲಕ್ಷ ರೂ.ನಿಂದ ನಾಲ್ಕು ಕೋಟಿ ರೂ.ವರೆಗೆ ಪಡೆದು ಆಮೇಲೆ ಯಾರಿಗೂ ಕಾಣದಂತೆ ನಿಗೂಢವಾಗಿ ತಪ್ಪಿಸಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.


