ಬೆಳ್ತಂಗಡಿ: ಚೆಕ್ ಬೌನ್ಸ್ ಪ್ರಕರಣದ ಆರೋಪಿಗೆ ಬೆಳ್ತಂಗಡಿಯ ಪ್ರಥಮ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

1,97,345 ರೂ. ಮೊತ್ತದ ಚೆಕ್ ನಿರಾಕರಿಸಲ್ಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಲಯವು ಆರೋಪಿ ಶಿವಪ್ರಸಾದ್ ಶೆಟ್ಟಿ ಅವರಿಗೆ 2,00,345 ರೂ. ದಂಡ ವಿಧಿಸಿ, ಅದರ ಪೈಕಿ 1,99,345 ರೂ. ಅನ್ನು ಪರಿಹಾರ ಮೊತ್ತವಾಗಿ ದೂರುದಾರರಿಗೆ ಪಾವತಿಸಲು ಆದೇಶಿಸಿದೆ.

ಘಟನೆಯ ವಿವರ:
ದ.ಕ. ಜಿಲ್ಲೆಯ ನ್ಯಾಯತರ್ಪು ಗ್ರಾಮದ ನಿವಾಸಿಯಾಗಿರುವ ದೂರುದಾರ ಶ್ರವಣ್ ಕುಮಾರ್ ಕೆ. ಅವರಿಂದ ಲಾಯಿಲ ಗ್ರಾಮದ ಶಿವಪ್ರಸಾದ್ ಶೆಟ್ಟಿ ಎಂಬವರು ಸಾಲವಾಗಿ ಹಣ ಪಡೆದಿದ್ದು, ಅದನ್ನು ಹಿಂದಿರುಗಿಸಲು ಚೆಕ್ ನೀಡಿದ್ದಾರೆ. ಆದರೆ ಚೆಕ್ ಪಾವತಿಗೆ ಬ್ಯಾಂಕ್‌ಗೆ ಸಲ್ಲಿಸಿದಾಗ, ಖಾತೆಯಲ್ಲಿ ಹಣವಿಲ್ಲ ಎಂಬ ಕಾರಣದಿಂದ ಬ್ಯಾಂಕ್ ಅದನ್ನು ನಿರಾಕರಿಸಿತ್ತು. ಈ ಸಂಬಂಧ ದೂರುದಾರರು 2022ರ ಸಪ್ಟೆಂಬರ್‌ನಲ್ಲಿ ದೂರು ದಾಖಲಿಸಿದ್ದಲ್ಲದೆ, ಕಾನೂನು ನೋಟಿಸ್ ಕಳುಹಿಸಿದ್ದರು. ಆದರೂ ಆರೋಪಿತ ಹಣ ಪಾವತಿಸದೆ ನಿರ್ಲಕ್ಷಿಸಿದ್ದು ಇದರ ಬೆನ್ನಲ್ಲೇ ದೂರುದಾರರು ಕಾನೂನು ಕ್ರಮ ಕೈಗೊಂಡಿದ್ದರು. ಈ ಪ್ರಕರಣದ ವಿಚಾರಣೆ 2 ವರ್ಷ 8 ತಿಂಗಳು ಕಾಲ ನಡೆದಿದ್ದು, ದೂರುದಾರರು ನೀಡಿದ ಸಾಕ್ಷ್ಯಗಳು ಹಾಗೂ ದಾಖಲೆಗಳನ್ನು ಆಧರಿಸಿ ನ್ಯಾಯಾಧೀಶರಾದ ಮನು ಬಿ.ಕೆ. ಅವರು ಕಾನೂನಿನನ್ವಯ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.
ಆರೋಪಿ ದಂಡ ಪಾವತಿಸಲು ವಿಫಲರಾದರೆ, 6 ತಿಂಗಳು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ರೂ.1,000 ನ್ನು ರಾಜ್ಯ ಸರಕಾರದ ವ್ಯಯದ ರೂಪದಲ್ಲಿ ಪಾವತಿಸಲು ಆದೇಶ ನೀಡಲಾಗಿದೆ.




