ಮಂಗಳೂರು: ಕಳೆದ ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಕೆಲವೊಂದು ಮನೆಯೊಳಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ,.

ನಗರದ ಕೊಡಿಯಾಲ್ ಬೈಲು, ಪಂಪ್ವೆಲ್, ಪಡೀಲ್, ಬಜಾಲ್, ಮಾಲೆಮಾರ್, ಜಪ್ಪಿನಮೊಗರು, ಕೊಟ್ಟಾರಚೌಕಿ ಸಹಿತ ನಗರದ ಕೆಲವೊಂದು ಭಾಗದ ಮನೆ ಆವರಣಕ್ಕೆ ಕೃತಕ ನೆರೆ ಆವರಿಸಿದೆ. ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರಸ್ತೆ ಬದಿ ನಿಲ್ಲಿಸಿದ್ದ ಕೆಲ ವಾಹನಗಳಿಗೂ ಹಾನಿಯಾಗಿದೆ.

ಇದೆ ವೇಳೆ ಮಂಗಳೂರಿನ ಸರ್ಕೀಟ್ ಹೌಸ್ ಬಳಿ ಗುಡ್ಡ ಕುಸಿದ ಘಟನೆ ನಡೆದಿದೆ. ಗುಡ್ಡದ ಮಣ್ಣು ರಸ್ತೆಗೆ ಬಿದ್ದ ಪರಿಣಾಮ, ಒಂದು ಬದಿಯ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ನಗರದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.



