Breaking
25 Mar 2026, Wed

ದ.ಕ ಜಿಲ್ಲೆಯ 428 ಪರವಾನಿಗೆದಾರರಿಗೆ ಮರಳು ತೆಗೆಯಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಪ್ರಭಾಕರ ಪ್ರಭು ಮನವಿ

ಬಂಟ್ವಾಳ : ದ.ಕ ಜಿಲ್ಲೆಯ 428 ಪರವಾನಿಗೆದಾರರೆಲ್ಲರಿಗೂ ಮರಳು ತೆಗೆಯಲು ಅನುಮತಿ ನೀಡುವಂತೆ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಪ್ರಭಾಕರ ಪ್ರಭು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.

ಮನವಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಮರಳಿನ ಸಮಸ್ಯೆ ತೀವ್ರವಾಗಿ ತಲೆದೋರಿದ್ದು, ಗೃಹ ನಿರ್ಮಾಣ, ಕಟ್ಟಡ ನಿರ್ಮಾಣಗಳು ಸೇರಿದಂತೆ ರಸ್ತೆ ಕಾಮಗಾರಿಗಳು ಕುಂಠಿತವಾಗಿದ್ದು ಈ ಕೆಲಸ ಕಾರ್ಯಗಳಲ್ಲಿ ತೊಡಗಿರುವ ಕಾರ್ಮಿಕರು ಸೇರಿ ಇನ್ನಿತರ ಅವಲಂಬಿತ ಜನರು ತಮ್ಮ ಜೀವನ ಸಾಗಿಸುವರೇ ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳಿನ ಅಭಾವ ಸೃಷ್ಟಿಯಾಗಲು ಗಣಿ ಇಲಾಖೆಯ ಅಧಿಕಾರಿಗಳ ಮತ್ತು ಜಿಲ್ಲಾಡಳಿತದ ಅವೈಜ್ಞಾನಿಕ ಸೂತ್ರವೇ ಪ್ರಮುಖ ಕಾರಣವಾಗಿದೆ ಎಂದು ಸಾರ್ವಜನಿಕವಾಗಿ ವಲಯದಲ್ಲಿ ಚರ್ಚೆಯಾಗುತ್ತಿದ್ದು , ಅಂದರೆ ಜಿಲ್ಲೆಯಲ್ಲಿ ಸಿ.ಆರ್.ಝಡ್ ವಲಯದಲ್ಲಿ ಮರಳು ತೆಗೆಯಲು 2010 ರ ಹಿಂದೆ 100 ಮಂದಿಗೆ ಪರವಾನಿಗೆ ನೀಡಲಾಗಿತ್ತು. ತದನಂತರ 2014-15 ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಮರಳಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಹೆಚ್ಚುವರಿಯಾಗಿ 328 ಮಂದಿಗೆ ಮರಳು ತೆಗೆಯಲು ಪರವಾನಿಗೆ ನೀಡಿದ್ದರಿಂದ 3-4 ವರ್ಷಗಳ ಕಾಲ ಮರಳಿನ ಸಮಸ್ಯೆ ತಲೆದೋರಲಿಲ್ಲ .

ನಂತರದಲ್ಲಿ ಬಂದಿರುವ ಜಿಲ್ಲಾಧಿಕಾರಿಗಳು ಮತ್ತು ಗಣಿ ಇಲಾಖೆ ಉಪ ನಿರ್ದೇಶಕರು 2010ರ ಮೊದಲು ಪರವಾನಿಗೆ ಪಡೆದವರಿಗೆ ಮಾತ್ರ ಎಂಬ ಷರತ್ತು ಹಾಕಿ ಅನುಮತಿ ನೀಡಿರುವುದರಿಂದ ಮರಳಿನ ಸಮಸ್ಯೆ ಉಲ್ಬಣಗೊಳ್ಳಲು ಪ್ರಮುಖ ಕಾರಣವಾಗಿದೆ.

ನೈಜವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈಸರ್ಗಿಕವಾದ ಮರಳಿನ ಕೊರತೆ ಇಲ್ಲದಿದ್ದರೂ ಸಹ ಅಧಿಕಾರಿಗಳ ಮಟ್ಟದಲ್ಲಿ ಆಗುವ ಎಡವಟ್ಟಿನಿಂದಾಗಿ ಅಕ್ರಮ ಸಾಗಾಟ ಮತ್ತು ಮರಳಿನ ಅಭಾವಕ್ಕೆ ಕಾರಣವಾಗಿದೆ. ಆದುದರಿಂದ ಮರಳು ತೆಗೆಯುವ ವಿಚಾರದಲ್ಲಿ ಸರಕಾರದ ಮಟ್ಟದಲ್ಲಿ ಎದುರಾಗುವ ಎಲ್ಲಾ ಅಡೆ ತಡೆ ಮತ್ತು ತಾಂತ್ರಿಕ ತೊಂದರೆಗಳನ್ನು ಬಗೆಹರಿಸಿಕೊಂಡು ಜಿಲ್ಲೆಯಲ್ಲಿನ ಸಿ.ಆರ್.ಝಡ್ ನಲ್ಲಿ ಮರಳು ತೆಗೆಯಲು ಜಿಲ್ಲೆಯಲ್ಲಿ ಈಗಾಗಲೇ ಪರವಾನಿಗೆ ಪಡೆದಿರುವ ಎಲ್ಲಾ 428 ಮಂದಿ ಪರವಾನಿಗೆದಾರರೆಲ್ಲರಿಗೂ ಗಣಿ ಇಲಾಖೆಯಿಂದ ಅನುಮತಿ ನೀಡಬೇಕಾಗಿ ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *