ಆನೇಕಲ್: ಬೆಂಗಳೂರಿನ ಆನೇಕಲ್ ತಾಲೂಕಿನ ಮೈಲಸಂದ್ರ ಬಳಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ದಿನಸಿ ತರಲು ಅಂಗಡಿಗೆ ತೆರಳುತ್ತಿದ್ದ ಯುವತಿಗೆ ಪೋಲಿ ಹುಡುಗರ ಗುಂಪೊಂದು ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನೀಡಿದ್ದಲ್ಲದೇ, ಆಕೆಯ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಆಕೆ ಸಂಜೆ ದಿನಸಿ ತರಲು ಅಂಗಡಿಗೆ ಹೊರಟಿದ್ದಳು. ಈ ಸಂದರ್ಭ ಐದಾರು ಮಂದಿ ಪೋಲಿ ಹುಡುಗರು ನಡುರಸ್ತೆಯಲ್ಲಿ ಯುವತಿಯನ್ನು ಅಡ್ಡ ಹಾಕಿದ್ದಾರೆ. ಬಳಿಕ, ಓರ್ವ ಯುವಕ ಯುವತಿಯ ಮೈಕೈ ಮುಟ್ಟಿ ಎಳೆದಾಡಿದ್ದಾನೆ. ಇದಕ್ಕೆ ಯುವತಿ ಪ್ರತಿರೋಧ ತೋರಿದಾಗ, ಓರ್ವ ಯುವಕ ಆಕೆ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಈ ಸಂದರ್ಭ ಸ್ಥಳೀಯರು ಯುವತಿಯ ನೆರವಿಗೆ ಧಾವಿಸಿದ್ದಾರೆ. ನೆರವಿಗೆ ಧಾವಿಸಿದ ಸ್ಥಳೀಯರ ಮೇಲೂ ಯುವಕರು ಹಲ್ಲೆ ಮಾಡಿದ್ದಾರೆ. ಸ್ಥಳೀಯರು ಯುವತಿಯನ್ನು ಪಾರು ಮಾಡಿ ಮನೆಗೆ ಕರೆದುಕೊಂಡು ಬಂದರೂ ಬಿಡದ ಯುವಕರು, ಆಕೆಯ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಯುವತಿ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಕುರಿತು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

