ಬಂಟ್ವಾಳ: ದ. ಕ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ನಿ. ಬಿ.ಸಿರೋಡ್ ಇದರ 2024-2025 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸೆ. 20ರಂದು ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಜರಗಿತು.

ಮಹಾಮಂಡಲದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿಯನ್ನು ಮಂಡಿಸಿ “ಮಹಾಮಂಡಲವು 10.ಕೋಟಿ ರೂ ಠೇವಣಿ ಸಂಗ್ರಹಿಸಿದ್ದು, 5.50 ಕೋಟಿ ಸಾಲ ನೀಡಿದೆ. 5 ಕೋಟಿ ರೂ ಹೂಡಿಕೆ ಮಾಡಿದ್ದು ಪ್ರಸ್ತುತ ಸಾಲಿನಲ್ಲಿ 10.28 ಲಕ್ಷ ರೂ ನಿವ್ವಳ ಲಾಭಗಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 31 ಮೂರ್ತೆದಾರರ ಸಹಕಾರಿ ಸಂಘಗಳು ಇದ್ದು ಇದರಲ್ಲಿ ಈಗಾಗಲೇ 18 ಪ್ರಾಥಮಿಕ ಮೂರ್ತೆದಾರರ ಸಹಕಾರಿ ಸಂಘಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತೊಡಗಿದ್ದು ,ಸುಮಾರು 1000 ಕೋಟಿ ರೂ ವ್ಯವಹಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಮಹಾಮಂಡಲದ ವತಿಯಿಂದ ನೀಡುವ ಅತ್ಯುತ್ತಮ ಮೂರ್ತೆದಾರರ ಸಹಕಾರಿ ಸಂಘ ಪ್ರಶಸ್ತಿ ಯನ್ನು ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಹಾಗೂ ಅಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘಗಳಿಗೆ ನೀಡಿ ಸನ್ಮಾನಿಸಲಾಯಿತು ಹಾಗೂ ಸಭೆಗೆ ಆಗಮಿಸಿದ ಎಲ್ಲಾ ಪ್ರಾಥಮಿಕ ಮೂರ್ತೆ ದಾರರ ಸೇವಾ ಸಹಕಾರಿ ಸಂಘಗಳಿಗೆ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಉಪಾಧ್ಯಕರಾದ ರಾಜೇಶ್ ಸುವರ್ಣ, ನಿರ್ದೇಶಕರಾದ ವಿಜಯ ಕುಮಾರ್ ಸೊರಕೆ, ಆರ್. ಸಿ. ನಾರಾಯಣ್ ರೆಂಜ, ಪುರುಷ ಎನ್ ಸಾಲಿಯಾನ್, ಅಣ್ಣಿ ಯಾನೆ ನೊಣಯ್ಯಾ, ವಿಶ್ವನಾಥ ಪೂಜಾರಿ ಪಂಜ, ಬೇಬಿ ಕುಂದರ್, ವಿಶ್ವನಾಥ ಬಿ. ಶಿವಪ್ಪ ಸುವರ್ಣ, ಪದ್ಮನಾಭ ಕೋಟ್ಯಾನ್, ಹರೀಶ್ ಸುವರ್ಣ, ಗಣೇಶ್ ಪೂಜಾರಿ, ಉಪಸ್ಥಿತರಿದ್ದರು.

ನಿರ್ದೇಶಕರಾದ ಉಷಾ ಅಂಚನ್ ಸ್ವಾಗತಿಸಿ, ಸಿ. ಇ. ಒ ಕಿಶೋರ್ ಕುಮಾರ್ ಕಾರ್ಯಕ್ರಮ ನಿರೂಪಿಸಿ , ಶೈಲಜಾ ಕೆ ವಂದಿಸಿದರು.



