ಬಂಟ್ವಾಳ: ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತ್ಯಾಜ್ಯ ನಿರ್ವಹಣೆಯ ಬಗೆಗೆ ಮಾಹಿತಿ ನೀಡುವ ಕಾರ್ಯಕ್ರಮವು ಶಂಭೂರಿನ ಎಮ್ ಆರ್ ಎಫ್ ಘಟಕದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಅವರು ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದೆ ನೂರಾರು ವರ್ಷಗಳು ಹಾಗೆಯೇ ಉಳಿಯುವುದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿದೆ. ಅದನ್ನು ಪರಿಹರಿಸಲು ಪ್ಲಾಸ್ಟಿಕ್ , ಬಟ್ಟೆ ಮುಂತಾದ ಅಜೈವಿಕ ವಸ್ತುಗಳನ್ನು ಬೇರ್ಪಡಿಸಿ ವಿವಿಧ ಮರುಬಳಕೆ ಉತ್ಪನ್ನಗಳ ತಯಾರಿಗಾಗಿ ಅದನ್ನು ಕಳುಹಿಸಿಕೊಡಲು ಇಂತಹ ತ್ಯಾಜ್ಯ ನಿರ್ವಹಣಾ ಘಟಕಗಳು ಕೆಲಸ ಮಾಡುತ್ತಿವೆ ಎಂದರು.

ನಿರ್ವಹಣಾ ಘಟಕದ ಮೇಲ್ವಿಚಾರಕ ನವನೀತ್ ರವರು ಘಟಕದ ಚಟುವಟಿಕೆಗಳನ್ನು ವಿವರಿಸಿ ಪ್ಲಾಸ್ಟಿಕ್ ನ ಸೂಕ್ಷ್ಮ ಕಣಗಳು ಸಸ್ಯ, ಪ್ರಾಣಿ, ಮೀನಿನ ಮೂಲಕ ನಮ್ಮ ದೇಹ ಸೇರಿ ಕ್ಯಾನ್ಸರ್ ಉಂಟು ಮಾಡಬಲ್ಲದು ಎಂದರು.

ಈ ಸಂದರ್ಭದಲ್ಲಿ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್, ಅಭಿವೃದ್ಧಿ ಅಧಿಕಾರಿ ಹರೀಶ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ವಿದ್ಯಾ ಪುಷ್ಪರಾಜ್ ಮತ್ತು ಸದಸ್ಯರು, ಶಾಲಾ ಪೋಷಕರು, ಪಂಚಾಯತ್ ಸಿಬ್ಬಂದಿಗಳು, ಮುಖ್ಯ ಶಿಕ್ಷಕರಾದ ಕಮಲಾಕ್ಷ ಕಲ್ಲಡ್ಕ, ಶಿಕ್ಷಕರಾದ ಹರಿಪ್ರಸಾದ್, ಭಾರತಿ ಉಪಸ್ಥಿತರಿದ್ದರು.

ಈ ವೇಳೆ ಪರಿಸರದಲ್ಲಿ ಗಿಡ ನಾಟಿ ಮಾಡಲಾಯಿತು. ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ನರಿಕೊಂಬು ಗ್ರಾಮ ಪಂಚಾಯತ್ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.




