ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಸಜೀಪನಡುವಿನ ದೇರಾಜೆಯಲ್ಲಿ ತಲವಾರು ದಾಳಿ ನಡೆದಿದೆ ಎಂಬ ಸುಳ್ಳು ಸುದ್ದಿ ಹರಿದಾಡಿದ್ದು, ಅಲ್ಲಿ ನಿಜವಾಗಿ ಬೈಕಿನಲ್ಲಿ ತೆರಳುತ್ತಿದ್ದ ಸವಾರರನ್ನು ಓರ್ವ ವ್ಯಕ್ತಿ ಓಡಿಸಿಕೊಂಡು ಹೋದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರರಾದ ಮೊಹಮ್ಮದ್ ಮುಕ್ಬುಲ್ ರವರು ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಸಂಬಂಧಿಯೊರ್ವರ ಸ್ಕೂಟರ್ ನಲ್ಲಿ ಸಹಚಾಲಕರಾಗಿ ಕುಳಿತು ಬೊಳ್ಯಾರ್ ಕಡೆಯಿಂದ ಮೆಲ್ಕಾರ್ ಕಡೆಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ದೇರಾಜೆ ಬಸ್ ನಿಲ್ದಾಣದ ಬಳಿ ಸ್ಕೂಟರ್ ನಲ್ಲಿ ಇಬ್ಬರು ಅಪರಿಚಿತರು ಹೆಲ್ಮೆಟ್ ಧರಿಸಿ ಕುಳಿತಿದ್ದು, ಅವರ ಪೈಕಿ ವ್ಯಕ್ತಿಯೊರ್ವ ಇವರ ಬೈಕನ್ನು ಹಿಂಬಾಲಿಸಿ ಓಡಿಕೊಂಡು ಬಂದಿದ್ದಾರೆ. ಈ ವೇಳೆ ಸವಾರರು ಬೈಕಿನ ವೇಗವನ್ನು ಹೆಚ್ಚಿಸಿ ತಪ್ಪಿಸಿಕೊಂಡು ಬಂದಿದ್ದಾರೆ.

ಆ ವೇಳೆ ಹಿಂಬಾಲಿಸಿ ಬಂದ ವ್ಯಕ್ತಿಯ ಕೈಯಲ್ಲಿ ತಲವಾರು ಅಥವಾ ಯಾವುದೇ ಮಾರಕಾಯುಧವನ್ನು ದೂರುದಾರರು ನೋಡಿರುವುದಿಲ್ಲ. ಆ ವ್ಯಕ್ತಿ ಓಡಿ ಬರುತ್ತಿರುವುದನ್ನು ಗಮನಿಸಿದ ದೂರುದಾರರು ಸ್ಕೂಟರ್ ಚಾಲನೆ ಮಾಡುತ್ತಿದ್ದ ತನ್ನ ಸಂಬಂಧಿಕನಲ್ಲಿ ವೇಗವಾಗಿ ಹೋಗುವಂತೆ ತಿಳಿಸಿದ್ದಾರೆ. ಹಿಂತಿರುಗಿ ನೋಡದೇ ನಂದಾವರದ ಮನೆಗೆ ತೆರಳಿದ ಅವರು ತನ್ನ ತಂದೆಗೆ ಘಟನೆಯ ಬಗ್ಗೆ ತಿಳಿಸಿರುತ್ತಾರೆ.

ವಾಟ್ಸಾಪ್ ಗಳಲ್ಲಿ ಪ್ರಸಾರವಾಗುತ್ತಿರುವ ತಲವಾರು ದಾಳಿ ಎಂಬ ಸುಳ್ಳುಸುದ್ದಿಗಳಿಗೂ ತನಗೂ ಯಾವುದೇ ಸಂಬಂಧ ಇರುವುದಿಲ್ಲ ಹಾಗೂ ತಾನು ಸ್ಥಳದಲ್ಲಿ ಜನರನ್ನು ಜಮಾವಣೆಗೊಳಿಸಿರುವುದಿಲ್ಲ ಎಂಬುದಾಗಿ ದೂರುದಾರು ವಿಚಾರಣೆಯ ವೇಳೆ ತಿಳಿಸಿರುತ್ತಾರೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜತೆಗೆ ಕಳೆದ ವಾರ ಅದೇ ಸ್ಥಳದಲ್ಲಿ ನಡೆದ ಕೊಲೆ ಯತ್ನ ಪ್ರಕರಣ ಹಾಗೂ ಬಕ್ರೀದ್ ಸಂದರ್ಭದಲ್ಲಿ ಹಸುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


