Breaking
16 Jul 2026, Thu

ಮಂಗಳೂರು: ಅಪರಿಚಿತ ವ್ಯಕ್ತಿಯ ಶವ ಪತ್ತೆ

ಮಂಗಳೂರು: ನಗರದ ನೆಹರೂ ಮೈದಾನದ ಕ್ರಿಕೆಟ್‌ ಪೆವಿಲಿಯನ್‌ ಪಕ್ಕದ ಮೆಸ್ಕಾಂ ಕಚೇರಿಯ ಮುಂಭಾಗ ಇರುವ ಗೇಟಿನ ಬಳಿ ಸುಮಾರು 45-50 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ಮೃತರ ಕೆಳ ತುಟಿ, ಎಡ ಕೈ ಮಣಿಗಂಟಿನ ಮೇಲ್ಭಾಗ ಮಾಂಸ ಕಿತ್ತು ಹೋದ ಗಾಯಗಳು ಪತ್ತೆಯಾಗಿದ್ದು,ತರಚಿದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಮೃತರು, 5 ಅಡಿ 6 ಇಂಚು ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ಕಪ್ಪು ತಲೆಗೂದಲು ಇದ್ದು, ತಿಳಿ ಹಸುರು ಮತ್ತು ಕಪ್ಪು ಗೆರೆಗಳಿರುವ ಉದ್ದ ತೋಳಿನ ಅಂಗಿ ಧರಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ನೆಹರೂ ಮೈದಾನದ ಪರಿಸರದಲ್ಲಿ ವಿಚಾರಿಸಿದಾಗ ಹೆಸರು, ವಿಳಾಸ ತಿಳಿದು ಬಂದಿಲ್ಲ. ಆಟೋ ಚಾಲಕ ಬೈಜು ಕೆ.ಕೆ. ಎಂಬವರು ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಈ ಬಗ್ಗೆ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಮಂಗಳೂರು ದಕ್ಷಿಣ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

Leave a Reply

Your email address will not be published. Required fields are marked *