Breaking
22 Mar 2026, Sun

ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಮಹಿಳೆ ಮೇಲೆ ದಾಳಿಗೆ ಯತ್ನಿಸಿದ ಆನೆ

ಕೊಡಗು: ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಯೊಂದು ತೋಟ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಮಹಿಳೆಯ ಮೇಲೆ ದಾಳಿಗೆ ಯತ್ನಿಸಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸಿದ್ದಾಪುರ ಸಮೀಪದ ನಲ್ವತ್ತೆಕರೆ ಗ್ರಾಮದಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.

ಕವಿತಾ (40) ಎಂಬ ಮಹಿಳೆ ಕಾಡಾನೆಯ ದಾಳಿಯಿಂದ ಗಾಯಗೊಂಡಿದ್ದಾರೆ.

ಮಹಿಳೆಗೆ ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿನ ನೆಲ್ಯಹುದಿಕೇರಿ, ಅತ್ತಿಮಂಗಲ, ನಲ್ವತ್ತೆಕರೆ ಮತ್ತಿತರ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಚರಣೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೈಗೊಂಡಿದ್ದರು.

ಈ ನಿಟ್ಟಿನಲ್ಲಿ ಇಂದು ಬೆಳಗ್ಗಿನಿಂದ ಹುಡುಕಾಟ ನಡೆಸಿದರೂ ಯಾವುದೇ ಕಾಡಾನೆಗಳು ಪತ್ತೆಯಾಗಿರಲಿಲ್ಲ. ನಂತರ ಮಧ್ಯಾಹ್ನದ ವೇಳೆಯಲ್ಲಿ ಕಾಫಿ ತೋಟವೊಂದರಲ್ಲಿ ಒಂಟಿ ಸಲಗ ಕಾಣಿಸಿಕೊಂಡಿತ್ತು.

ಅರಣ್ಯ ಇಲಾಖೆ ಸಿಬ್ಬಂದಿ ಕಾಫಿ ತೋಟದ ಮಾರ್ಗದ ಮಧ್ಯ ಭಾಗದಿಂದ ಅರಣ್ಯಕ್ಕೆ ಓಡಿಸಲು ಮುಂದಾಗಿದ್ದರು. ಆಗ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಿದ ಕಾಡಾನೆ ಮನೆಯೊಂದರ ಹಲಸಿನ ಮರದ ಸಮೀಪ ನಿಂತಿದೆ.

ಈ ಸಂದರ್ಭ ಆನೆಯು ತೋಟದಲ್ಲಿ ಕೆಲಸ ನಿರ್ವಹಿಸಿ ಮನೆಗೆ ಮರಳುತ್ತಿದ್ದ ಕವಿತಾ ಅವರನ್ನು ಕಂಡು ದಾಳಿ ಮಾಡಲು ಯತ್ನಿಸಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಮಹಿಳೆಯನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಬಳಿಕ ಕಾಡಾನೆಯನ್ನ ಕಾಡಿಗೆ ಓಡಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾದರು.

Leave a Reply

Your email address will not be published. Required fields are marked *