ಕಾರ್ಕಳ: ವೀಸಾ ಐಡಿ ಕೊಟ್ಟು ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ತಾಲೂಕಿನ ತೆಳ್ಳರುವಿನ ಸಂದೀಪ್ ಎಂಬ ಯುವಕ, ಶಾಸಕ ಸುನಿಲ್ ಕುಮಾರ್ ಅವರ ಪ್ರಯತ್ನದಿಂದ ತಾಯಿನಾಡಿಗೆ ಮರಳಿದ್ದಾನೆ.
ದುಬೈನಲ್ಲಿ ಕೆಲಸಕ್ಕಿದ್ದ ಸಂದೀಪ್ ಮೇಲೆ ಅಚಾನಕ್ ನಿರ್ಬಂಧ ಬಿದ್ದಿತ್ತು – ಊರಿಗೆ ಬರಲು ಅವಕಾಶವಿರಲಿಲ್ಲ, ಅವರು ಲಕ್ಷಾಂತರ ರೂಪಾಯಿ ದಂಡ ಅಲ್ಲಿನ ಸರಕಾರಕ್ಕೆ ಕಟ್ಟಬೇಕಿತ್ತು. ಆದರೆ ಅಷ್ಟೊಂದು ಹಣ ಹೊಂದಿಸುವುದು ಸಂದೀಪ್ ಅವರಿಗೆ ಅಸಾಧ್ಯವಾದ ಹಿನ್ನೆಲೆ ಅಲ್ಲಿ ಶಿಕ್ಷೆಗೆ ಗುರಿಯಾಗಿದ್ದರು.

ಇದರಿಂದ ಕಳೆದ ಆರು ವರ್ಷಗಳಿಂದ ತನ್ನ ಮಗ ಸಂದೀಪ್‌ನನ್ನು ನೋಡದ ನೋವಿನಲ್ಲಿ ಬದುಕುತಿದ್ದ ತೆಳ್ಳಾರು ಗ್ರಾಮದ ವೃದ್ಧೆ ಸುನಂದಾ ಅವರ ಮಗನನ್ನು ತನ್ನ ಮಡಿಲು ಸೇರಿಸಲು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಅವರ ಕಚೇರಿಗೆ ತೆರಳಿ ಮಗನನ್ನು ನನಗೆ ಒಪ್ಪಿಸಲು ಅಂಗಲಾಚಿದ್ದರು. ಈ ಘಟನೆ 6 ತಿಂಗಳ ಹಿಂದೆ ನಡೆದಿತ್ತು.
ಶಾಸಕರು ತಕ್ಷಣವೇ ದುಬೈನಲ್ಲಿ ನೆಲೆಸಿರುವ ತಮ್ಮ ಸ್ನೇಹಿತ ಪ್ರತಾಪ್ ಶೆಟ್ಟಿ ಅವರನ್ನು ಸಂಪರ್ಕಿಸಿದ್ದರು. ಅಲ್ಲಿನ ಸರಕಾರ ಮಟ್ಟದಲ್ಲಿ ಪ್ರಯತ್ನ ನಡೆಸಿ, ಲಕ್ಷಾಂತರ ಮೊತ್ತದ ದಂಡ ಕಡಿತಗೊಳಿಸಿ, ಬಾಕಿಯಿದ್ದ ಲಕ್ಷಾಂತರ ರೂಪಾಯಿ ಹಣ ಪಾವತಿಸಿದ ಶಾಸಕರು, ನಿರ್ಬಂಧ ಇನ್ನಿತರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಲ್ಲಿ ಪ್ರಯತ್ನಿಸಿದ್ದರು. ಇದೆಲ್ಲದರ ಫಲಶ್ರುತಿಯಿಂದ ದುಬೈನಲ್ಲಿದ್ದ ಮಗ ಈಗ ಮರಳಿ ತಾಯಿಯ ಮಡಿಲು ಸೇರಿದ್ದಾರೆ.
ಆರು ವರ್ಷಗಳ ನಂತರ ತಾಯಿಯ ಕಣ್ಣೀರಿಗೆ ಬೆಲೆ ಸಿಕ್ಕಿದೆ. ಶಾಸಕರ ಮಾನವೀಯ ಕಾರ್ಯ ಹೆತ್ತ ಒಡಲಿನ ನೋವು ನಿವಾರಿಸುವ ಕಡೆಗೆ ಸಾಗಿದೆ. ಶಾಸಕ ಸುನಿಲ್ ಕುಮಾರ್ ಪ್ರಯತ್ನಕ್ಕೆ ದುಬೈನಲ್ಲಿನ ಪ್ರತಾಪ್ ಶೆಟ್ಟಿ ಸಾತ್ ನೀಡಿದ್ದು, ಶಾಸಕರ ಮಾನವೀಯ ಸ್ಪಂದನೆಗೆ ಕುಟುಂಬ ಕೃತಜ್ಞತೆ ಸಲ್ಲಿಸಿದೆ.

ಊರಿಗೆ ಮರಳಿದ ಯುವಕ ಸಂದೀಪ್ ಮಾತನಾಡಿ, ಮಂಗಳೂರು ಮೂಲದ ವ್ಯಕ್ತಿಯ ಷಡ್ಯಂತ್ರದಿಂದ ನಾನು ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದೆ. ನಂಬಿಕೆಯಿಂದ ವೀಸಾ ಐಡಿ ಕೊಟ್ಟು ತೊಂದರೆಗೆ ಸಿಲುಕಿಕೊಂಡೆ. ಸರಕಾರ ವಿಧಿಸಿದ ದುಬಾರಿ ದಂಡ ಕಟ್ಟಲು ನನಗೆ ಶಕ್ತಿ ಇರಲಿಲ್ಲ. ಅಸಾಯಕನಾದ ನಾನು ನೆರವಿಗಾಗಿ ಹಲವರನ್ನು ಕೇಳಿಕೊಂಡೆ. ಆದರೂ ಯಾರು ಸಹಾಯ ಮಾಡದೇ ಇದ್ದಾಗ ಶಾಸಕ ಸುನಿಲ್ ಕುಮಾರ್ ಅವರ ಮೊರೆ ಹೋಗಿದ್ದೆ. ಊರಲ್ಲಿದ್ದ ಅಮ್ಮ ತೀರ ನೊಂದಿದ್ದರು. ಅವರ ಕೂಡ ಶಾಸಕರಲ್ಲಿ ನನ್ನನ್ನು ಸೇಪಾಗಿ ಕರೆ ತರುವಂತೆ ಕೇಳಿಕೊಂಡಿದ್ದರು.
ಶಾಸಕರು ಸರ್ವ ರೀತಿಯಲ್ಲಿ ಸ್ದಂದಿಸಿ, ದಂಡದ ಲಕ್ಷಾಂತರ ರೂಪಾಯಿ ಆರ್ಥಿಕ ನೆರವು ನೀಡಿದರು. ತಮ್ಮ ಸ್ನೇಹಿತ ದುಬೈಯಲ್ಲಿರುವ ಪ್ರತಾಪ್ ಶೆಟ್ಟಿ ಅವರ ಜೊತೆ ನಿರಂತರ ಸಂವಹನ ನಡೆಸಿ ನನಗೆ ಮರಳಿ ಊರಿಗೆ ಬರಲು ಅಗತ್ಯ ಕ್ರಮ ಕೈಗೊಂಡರು. ಅದರ ಫಲವಾಗಿ ನಾನಿಂದು ಮನೆಗೆ ಬಂದು ತಾಯಿ ಜೊತೆ ಸೇರಿದ್ದೇನೆ. ನನಗೆ ಸಹಕರಿಸಿದ ಶಾಸಕರಿಗೆ, ನೆರವಾದ ಪ್ರತಾಪ್ ಶೆಟ್ಟಿ ಹೀಗೆ ನಾನು ಊರಿಗೆ ಸೇಪಾಗಿ ಬರಲು ಸಹಕರಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.


