ಮಂಗಳೂರು: ದೇರಳಕಟ್ಟೆಯ ನಾಟೆಕಲ್ಲಿನ ಕನಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ಬಾಂಬು ಇಟ್ಟು ಸ್ಫೋಟಿಸುವುದಾಗಿ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ಜೂ.4 ರಂದು ಬೆಳಕಿಗೆ ಬಂದಿದೆ.

ಬೆಳಗ್ಗೆ 8. 10 ರ ಸುಮಾರಿಗೆ ಆಸ್ಪತ್ರೆಯ ಹೆರಿಗೆ ವಿಭಾಗದ ದೂರವಾಣಿ ಸಂಖ್ಯೆಗೆ ಕರೆ ಬಂದಿದ್ದು ಪಿಜಿ ವಿದ್ಯಾರ್ಥಿನಿಯೊಬ್ಬಳು ಕರೆ ಸ್ವೀಕರಿಸಿದ್ದಾಳೆ. ಇಂಗ್ಲೀಷಲ್ಲಿ ಮಾತನಾಡಿದ ವ್ಯಕ್ತಿ 11 ಗಂಟೆಗೆ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಲ್ಲಿ ಬಾಂಬ್ ಸ್ಪೋಟಿಸುವುದಾಗಿ ಹೇಳಿದ್ದು ಎಲ್ಲರನ್ನು ಕೂಡಲೇ ಆಸ್ಪತ್ರೆಯಿಂದ ಹೊರಗೆ ಕಳುಹಿಸುವಂತೆ ಬೆದರಿಕೆ ಹಾಕಿದ್ದಾನೆ. ನಂತರವೂ ನಾಲೈದು ಬಾರಿ ಕರೆ ಬಂದಿದ್ದು ಮುಸ್ಲಿಂ ಭಾಷೆಯಲ್ಲೂ ಬೆದರಿಕೆ ಹಾಕಿದ್ಧಾನೆ ಎಂದು ತಿಳಿದು ಬಂದಿದೆ.

ಆಸ್ಪತ್ರೆಯ ಅಧಿಕಾರಿಗಳ ಮಾಹಿತಿಯಂತೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಬಾಂಬು ನಿಷ್ಕ್ರಿಯ ದಳ ಮತ್ತು ಶ್ವಾನ ದಳವನ್ನು ಕರೆಸಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಕ್ಯಾಂಪಸನ್ನ ತಪಾಸಣೆ ನಡೆಸಿದರು. ಪರಿಶೀಲನೆ ನಡೆಸಿದ ನಂತರ ಇದೊಂದು ಹುಸಿ ಬಾಂಬು ಬೆದರಿಕೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಕರೆ ಬಂದ ನಂಬರ್ ಗಳನ್ನು ಪರಿಶೀಲಿಸಿ ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.


