Breaking
23 Mar 2026, Mon

ಜೂನ್‌ 1: ಯಕ್ಷಧ್ರುವ ಪಟ್ಲ ದಶಮ ಸಂಭ್ರಮ – 2025: ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರದ ಕಲಾವಿದರಿಗೆ ಅಪಘಾತ ವಿಮೆ

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಆಶ್ರಯದಲ್ಲಿ “ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025″ ರಾಷ್ಟ್ರೀಯ ಕಲಾ ಸಮ್ಮೇಳನ ಜೂ. 1 ರಂದು ಅಡ್ಯಾರ್‌ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಪಟ್ಲ ಸತೀಶ್‌ ಶೆಟ್ಟಿ ತಿಳಿಸಿದರು.

ಅವರು ಮೇ 26ರಂದು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಬೆಳಗ್ಗೆ 9.30ಕ್ಕೆ ಉದ್ಯಮಿ ಶಶಿಧರ ಬಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ಸ್ಪೀಕರ್‌ ಯು. ಟಿ. ಖಾದರ್‌ ಕಾರ್ಯಕ್ರಮ ಉದ್ಘಾಟಿಸುವರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡುವರು.

ಬೆಳಗ್ಗೆ 11ಕ್ಕೆ ಡಾ |ಎಂ. ಮೋಹನ ಆಳ್ವ ಅವರ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ʼರಾಷ್ಟ್ರೀಯ ಕಲಾ ಸಮ್ಮೇಳನವನ್ನುʼ ಉದ್ಘಾಟಿಸುವರು. ಬಳಿಕ ಡಾ.ಆಳ್ವರ ನಿರ್ದೇಶನ ಮತ್ತು ಸಂಯೋಜನೆಯಲ್ಲಿ ಭಾರತದ 8 ಶಾಸ್ತ್ರೀಯ ಕಲೆಗಳ ಪ್ರದರ್ಶನ, ಯಕ್ಷಗಾನ ಹಾಗೂ ಭಾರತೀಯ ಕಲೆಗಳ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ ಎಂದರು.

ಮಧ್ಯಾಹ್ನ 1ಕ್ಕೆ ಎಂ ಆರ್‌ ಜಿ ಗ್ರೂಪ್‌ ಸಿ ಎಂ ಡಿ ಡಾ|ಕೆ.ಪ್ರಕಾಶ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಖ್ಯಾತ ಕ್ರಿಕೆಟ್‌ ಆಟಗಾರ ರೋಹಿತ್‌ ಶರ್ಮ ತಾರಾ ಮೆರುಗು ನೀಡುವರು.

ಸಂಜೆ 5.30ಕ್ಕೆ ಮುಂಬೈಯ ಹೇರಂಭ ಇಂಡಸ್ಟ್ರೀಸ್‌ ಸಿ ಎಂ ಡಿ ಕನ್ಯಾನ ಸದಾಶಿವ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭಾಗವಹಿಸಲಿದ್ದಾರೆ ಎಂದರು.

ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ
2025 ರ ʼಯಕ್ಷಧ್ರುವ ಮಹಾಪೋಷಕ ಪ್ರಶಸ್ತಿʼಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಶೆಟ್ಟಿ ದಂಪತಿಗಳಿಗೆ ನೀಡಿ ಗೌರವಿಸಲಾಗುವುದು.

2025 ರ ʼಯಕ್ಷಧ್ರುವ ಪಟ್ಲ ಪ್ರಶಸ್ತಿʼಯನ್ನು ಹಿರಿಯ ಯಕ್ಷಗಾನ ಭಾಗವತ, ವಿದ್ವಾಂಸ ಕುರಿಯ ಗಣಪತಿ ಶಾಸ್ತ್ರಿಯವರಿಗೆ ನೀಡಿ ಸನ್ಮಾನಿಸಲಾಗುವುದು.

ಸಮಾರಂಭದಲ್ಲಿ ವೈದ್ಯಕೀಯ ಆರ್ಥಿಕ ನೆರವು, ಉಚಿತ ವೈದ್ಯಕೀಯ ತಪಾಸಣೆ, ಕಣ್ಣಿನ ತಪಾಸಣೆ, ಕನ್ನಡಕ ಹಾಗೂ ಔಷಧ ವಿತರಣೆ, ಅಶಕ್ತ ಕಲಾವಿದರಿಗೆ ಗೃಹ ನಿರ್ಮಾಣಕ್ಕೆ ಸಹಾಯಧನ, 86 ಸರಕಾರಿ ಪ್ರೌಡಶಾಲೆಗಳ 9500 ವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣ ಯೋಜನೆಯಡಿ ಯಕ್ಷಗಾನ ಕಲಿಸಲಾಗುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಸಹಿತ ವಿವಿಧ ಕ್ಷೇತ್ರಗಳ ಹಿರಿಯ 16 ಸಾಧಕರಿಗೆ ಯಕ್ಷಧ್ರುವ ಕಲಾ ಗೌರವ – ತಲಾ ₹ 20,000 ನಗದಿನೊಂದಿಗೆ ಗೌರವಿಸಲಾಗುವುದು ಜೊತೆಗೆ ರಾಷ್ಟ್ರೀಯ ಕಲಾ ಸಮ್ಮೇಳನದಲ್ಲಿ8 ತಂಡಗಳ ತೆಂಕು ಮತ್ತು ಬಡಗು ತಿಟ್ಟಿನ ಯುವ ಕಲಾವಿದರಿಂದ ಯಕ್ಷಗಾನ ಸ್ಪರ್ಧೆ ನಡೆಯಲಿದೆ ಎಂದರು.

ವಿವಿಧ ಕ್ಷೇತ್ರದ ಕಲಾವಿದರಿಗೆ ಅಪಘಾತ ವಿಮೆ
ಯಕ್ಷಗಾನ, ನಾಟಕ ರಂಗಭೂಮಿ, ಕಂಬಳ ಮತ್ತು ದೈವಾರಾಧನೆ ಕ್ಷೇತ್ರದ 3,500 ಕಲಾವಿದರಿಗೆ ಅಪಘಾತ ವಿಮಾ ಯೋಜನೆ ಒದಗಿಸಲಾಗುವುದು. ಕಲಾವಿದರು ಒಂದು ಪ್ರತಿ ಭಾವಚಿತ್ರ ಹಾಗೂ ಕಲಾವಿದ ಹಾಗೂ ನಾಮಿನಿ ಆಧಾರ್‌ ಕಾರ್ಡ್‌ನೊಂದಿಗೆ ಹಾಜರಿರಬೇಕು. ಪಟ್ಲ ಸಂಭ್ರಮದಂದು ಬೆಳಗ್ಗೆ 8 ರಿಂದ ಸಂಜೆ 5ರ ತನಕ ಒಂದೇ ದಿನ ಮಾತ್ರ ನೋಂದಣಿಗೆ ಅವಕಾಶವಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟ್‌ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್‌, ಕೋಶಾಧಿಕಾರಿ ಸಿಎ ಸುದೇಶ್‌ ಕುಮಾರ್‌ ರೈ, ಸಂಘಟನಾ ಕಾರ್ಯದರ್ಶಿ ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್‌ ಆಳ್ವ ಕದ್ರಿ, ಜತೆ ಕಾರ್ಯದರ್ಶಿಗಳಾದ ರವಿಚಂದ್ರ ಶೆಟ್ಟಿ ಅಶೋಕನಗರ, ರಾಜೀವ್‌ ಪೂಜಾರಿ ಕೈಕಂಬ, ಉದಯಕುಮಾರ್‌ ಶೆಟ್ಟಿ, ಭುಜಬಲಿ ಧರ್ಮಸ್ಥಳ, ಬೊಳಿಯಾರ್‌ ಸಂತೋಷ್‌ ರೈ, ಚಂದ್ರಹಾಸ ಶೆಟ್ಟಿ ರಂಗೋಲಿ, ಕರ್ನೂರು ಮೋಹನ್‌ ರೈ, ದೇವದಾಸ ಶೆಟ್ಟಿ ಬಂಟ್ವಾಳ, ಸರಪಾಡಿ ಅಶೋಕ ಶೆಟ್ಟಿ, ಸುಧಾಕರ ಪೂಂಜ ಸುರತ್ಕಲ್‌, ಗಿರೀಶ್‌ ಎಂ ಶೆಟ್ಟಿ ಕಟೀಲು, ಜಯರಾಮ ಶೇಖ, ಆರತಿ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *