ನವದೆಹಲಿ: ಕೆನಡಾದ ಎಡ್ಮಂಟನ್ನಲ್ಲಿ ಭಾರತೀಯ ಮೂಲದ 23 ವರ್ಷದ ಯುವತಿಯನ್ನು ಆಕೆಯ ಲಿವ್-ಇನ್ ಪ್ರಿಯಕರ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್ನ ಲುಧಿಯಾನ ಜಿಲ್ಲೆಯ ಸಮ್ರಾಲಾ ಮೂಲದ ದಮನ್ಪ್ರೀತ್ ಕೌರ್ ಹತ್ಯೆಯಾದ ಯುವತಿ. ಆಕೆಯ ಲಿವ್-ಇನ್ ಪ್ರಿಯಕರ ರಿತೀಶ್ ಕುಮಾರ್ (22) ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾನೆ.

ಜುಲೈ 9ರಂದು ರಿತೀಶ್, ದಮನ್ಪ್ರೀತ್ ಅವರ ಕತ್ತು ಹಿಸುಕಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಯುವತಿಯನ್ನು ಸ್ಥಳೀಯರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಜುಲೈ 12ರಂದು ದಮನ್ಪ್ರೀತ್ ಮೃತಪಟ್ಟಿದ್ದರು.

ಪೊಲೀಸರ ತನಿಖೆಯ ಬಳಿಕ ಜುಲೈ 14ರಂದು ಇದು ಕೊಲೆ ಪ್ರಕರಣ ಎಂದು ದೃಢಪಡಿಸಲಾಯಿತು. ತನಿಖೆಯ ಭಾಗವಾಗಿ ಮಾಹಿತಿ ಬಹಿರಂಗಪಡಿಸದೆ ಇದ್ದ ಪೊಲೀಸರು, ಜುಲೈ 22ರಂದು ಆರೋಪಿಯನ್ನು ಬಂಧಿಸಿದ್ದು, ಜುಲೈ 23ರಂದು ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಇದೇ ವೇಳೆ, ದಮನ್ಪ್ರೀತ್ ಕೌರ್ ಅವರ ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, GoFundMe ಮೂಲಕ ನಿಧಿ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ. ಇದುವರೆಗೆ ಸುಮಾರು ₹18 ಲಕ್ಷ ದೇಣಿಗೆ ಸಂಗ್ರಹವಾಗಿದ್ದು, ಇನ್ನಷ್ಟು ಸಹಾಯಕ್ಕಾಗಿ ಕುಟುಂಬಸ್ಥರು ಮನವಿ ಮಾಡಿದ್ದಾರೆ.


