ಮಂಗಳೂರು: ಕ್ವಾಟ್ರಸ್ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದಿದ್ದು ಪೌರಕಾರ್ಮಿಕ ಕುಟುಂಬ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಮಂಗಳೂರಿನ ಬೆಂದೂರು ವೆಲ್ ಲೋಬೊ ಲೇನ್ ಪ್ರದೇಶದಲ್ಲಿ ಮೇ.27 ರಂದು ನಡೆದಿದೆ.

ಮರ ಬೀಳುವ ವೇಳೆ ಅಲ್ಲೇ ಸಮೀಪದಲ್ಲಿ ಪಾತ್ರ ತೊಳೆಯುತ್ತಿದ್ದ ಪೌರಕಾರ್ಮಿಕ ಕುಟುಂಬದ ಮಹಿಳೆಯೊಬ್ಬರು ಮನೆಯ ಒಳಗೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ನಗರದ ಬೆಂದೂರು ವೆಲ್ ಲೋಬೊ ಲೇನ್ ಪ್ರದೇಶದಲ್ಲಿ ಕ್ವಾಟ್ರಸ್ ಹಿಂಭಾಗದಲ್ಲಿ ಅರಣ್ಯ ಇಲಾಖೆಗೆ ಸಂಬಂಧಪಟ್ಟ 50ಕ್ಕೂ ಅಧಿಕ ಮರಗಳಿದ್ದು ಗುಡ್ಡ ಪ್ರದೇಶ ಈಗಾಗಲೇ ಬಿರುಕು ಬಿಟ್ಟಿದೆ.

ಅಲ್ಲದೆ ಇನ್ನೂ ಹಲವು ಮರಗಳು ಇಲ್ಲಿನ ಕ್ವಾಟ್ರಸ್ ಮೇಲೆ ಬೀಳುವ ಹಂತದಲ್ಲಿದೆ. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದು, ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಮರಗಳನ್ನು ತೆರವುಗೊಳಿಸಲು ಸೂಚಿಸುವುದಾಗಿ ಭರವಸೆ ನೀಡಿದ್ದಾರೆ.

ಆದರೆ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಇನ್ನುಳಿದಿರುವ ಮರಗಳು ಯಾವುದೇ ಕ್ಷಣದಲ್ಲಿ ಬೀಳುವ ಸಾಧ್ಯತೆಗಳು ಹೆಚ್ಚಾಗಿದ್ದು, ಪೌರ ಕಾರ್ಮಿಕ ಕುಟುಂಬಗಳು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವ ಪರಿಸ್ಥಿತಿ ಎದುರಾಗಿದೆ.


