ಮೂಡಿಗೆರೆ: ತಾಲೂಕಿನ ಚಾರ್ಮಾಡಿ ಘಾಟ್ ಪ್ರದೇಶದ ಜಲಪಾತಗಳ ಬಳಿ ಪ್ರವಾಸಿಗರ ಹುಚ್ಚಾಟ ಈ ಭಾರಿ ಮತ್ತೆ ಮುಂದುವರಿದಿದೆ.

ನಿರಂತರವಾಗಿ ನೀರು ಹರಿಯುತ್ತಿರುವ ಕಾರಣ ಬಂಡೆಗಳು ತೀವ್ರವಾಗಿ ಜಾರುತ್ತಿದ್ದು, ಅಪಾಯದ ಎಚ್ಚರಿಕೆ ನೀಡಿದರೂ ಪ್ರವಾಸಿಗರು ಜೀವದ ಹಂಗು ಮರೆತು ಜಾರುವ ಬಂಡೆಗಳ ಮೇಲೆ ಹತ್ತಿ ಸೆಲ್ಫಿ, ವಿಡಿಯೋ ತೆಗೆದುಕೊಳ್ಳುವುದನ್ನು ಮಾಡುತಿದ್ದಾರೆ.

ಈ ಹಿಂದೆ ಇದೇ ಪ್ರದೇಶದಲ್ಲಿ ಅನೇಕರು ಬಿದ್ದು ಕೈ-ಕಾಲು ಮುರಿದುಕೊಂಡಿದ್ದು, ಜೀವ ಕಳೆದುಕೊಂಡವರೂ ಇದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಜಲಪಾತಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಸಿಗರು ಜಾರಿ ಬೀಳುವ ಸಾಧ್ಯತೆಗಳು ಹೆಚ್ಚಾಗಿದೆ.

ಪೊಲೀಸರು ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದು, ಪ್ರವಾಸಿಗರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಆದರೂ ಕೆಲವರು ಪೊಲೀಸರ ಕಣ್ತಪ್ಪಿಸಿ ಅಪಾಯಕರ ಸ್ಥಳಗಳಿಗೆ ಪ್ರವೇಶಿಸಿ ಪುಂಡಾಟ ಮೆರೆಯುತ್ತಿದ್ದಾರೆ.

ಸಾರ್ವಜನಿಕರು ತಮ್ಮ ಮತ್ತು ಇತರರ ಸುರಕ್ಷತೆಗಾಗಿ ಇಂತಹ ಸ್ಥಳಗಳಲ್ಲಿ ಬಹಳ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಸ್ಥಳೀಯ ಪೊಲೀಸರು ಮನವಿ ಮಾಡಿದ್ದಾರೆ.
