Breaking
22 Mar 2026, Sun

7 ನೇ ಮೇಳಕ್ಕೆ ಒಪ್ಪಿಗೆ ಸೂಚಿಸಿದ ಕಟೀಲು ದುರ್ಗಾಪರಮೇಶ್ವರಿ : ನ.16ರಂದು ತಿರುಗಾಟ ಆರಂಭ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಬಯಲಾಟ ಮಂಡಳಿಯ ಮುಂದಿನ ತಿರುಗಾಟ ಏಳು ಮೇಳಗಳೊಂದಿಗೆ ನಡೆಯಲಿದೆ .

ಈ ಕುರಿತು ಕಟೀಲು ದೇಗುಲದ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ರವಿವಾರ ಹೂಪ್ರಶ್ನೆಯ ಮೂಲಕ ದೇವರ ಒಪ್ಪಿಗೆ ಸಿಕ್ಕಿದ್ದು ಮುಂದಿನ ನ. 16ರಂದು ನೂತನ ಮೇಳಗಳೊಂದಿಗೆ ತಿರುಗಾಟ ನಡೆಯಲಿದೆ.

ಕಟೀಲು ಒಂದನೇ ಮೇಳ ಯಾವಾಗ ಆರಂಭವಾಗಿತ್ತು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಎರಡನೆಯ ಮೇಳ 1975, ಮೂರನೇ ಮೇಳ 82, ನಾಲ್ಕನೇ ಮೇಳ 93ರಲ್ಲಿ 2010ರಲ್ಲಿ ಐದನೇ ಹಾಗೂ 2013ರಲ್ಲಿ ಆರನೇ ಮೇಳ ಆರಂಭವಾಗಿತ್ತು.

ವರ್ಷಂಪ್ರತಿ ನೋಂದಣಿಯಾಗುತ್ತಿರುವ ಆಟಗಳ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಏಳನೆಯ ಮೇಳ ಆರಂಭಿಸಲಾಗುತ್ತಿದೆ. ವಾರ್ಷಿಕ ಸುಮಾರು 1,050 ಪ್ರದರ್ಶನಗಳಲ್ಲಿ 450 ಆಟ ಖಾಯಂ ಆಗಿವೆ. ಮುಂಗಡ ಬುಕ್ಕಿಂಗ್ 7 ಸಾವಿರಕ್ಕೂ ಹೆಚ್ಚು ಆಟಗಳಿದ್ದು ಕಳೆದ ವರ್ಷ 844 ಆಟ ಬುಕ್ಕಿಂಗ್ ಇತ್ತು.

ಬೆಂಗಳೂರು, ಮೈಸೂರು ಪ್ರದೇಶದಲ್ಲಿ ಆಟ ಆಡಿಸಲು ಬೇಡಿಕೆ ಇದೆ. 5ಕ್ಕೂ ಹೆಚ್ಚು ಬಯಲಾಟ ನಿರ್ದಿಷ್ಟ ಅವಧಿಯಲ್ಲಿ ಬುಕ್ಕಿಂಗ್ ಇದ್ದರೆ ಅಲ್ಲಿಯೂ ಆಟ ಆಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ , ಬಿಪಿನ್ಪ್ರಸಾದ್ ಶೆಟ್ಟಿ ಕೊಡೆತ್ತೂರು ಗುತ್ತು, ಪ್ರವೀಣ್ದಾಸ್ ಭಂಡಾರಿ ಕೊಡೆತ್ತೂರು ಗುತ್ತು, ಗಣೇಶ್ ಶೆಟ್ಟಿ ಐಕಳ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *