ಬೆಂಗಳೂರು: ಬೆಳ್ತಂಗಡಿ ಮೂಲದ ವಿದ್ಯಾರ್ಥಿನಿ ಆಕಾಂಕ್ಷ ಪಂಜಾಬ್ ನಲ್ಲಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು ವಿದ್ಯಾರ್ಥಿನಿ ಆಕಾಂಕ್ಷ ಪಂಜಾಬ್ ನಲ್ಲಿ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ಇದೊಂದು ಅಸಹಜ ಸಾವು ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.

ಉಪನ್ಯಾಸಕ ಮ್ಯಾಥ್ಯೂ ಅವರ ಕಿರುಕುಳದಿಂದ ಆಕಾಂಕ್ಷ ಸಾವಿಗೀಡಾಗಿದ್ದಾರೆ ಎಂದು ಅವರ ಕುಟುಂಬ ವರ್ಗದವರು ಆರೋಪಿಸಿದ್ದಾರೆ. ಪ್ರಕರಣ ಕುರಿತು ನಾನು ರಾಜ್ಯ ಮುಖ್ಯಕಾರ್ಯದರ್ಶಿಯವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಪಂಜಾಬ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಕಾಂಕ್ಷ ಮೃತದೇಹವನ್ನು ಕುಟುಂಬ ವರ್ಗದವರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸೂಚನೆ ನೀಡಿದ್ದೇನೆ. ಅಲ್ಲದೇ ಆಕಾಂಕ್ಷ ನಿಗೂಢ ಸಾವಿನ ಕುರಿತು ಸೂಕ್ತ ತನಿಖೆ ನಡೆಸುವ ನಿಟ್ಟಿನಲ್ಲಿ ಪಂಜಾಬ್ ಸರ್ಕಾರದ ಮುಖ್ಯಕಾರ್ಯದರ್ಶಿ ಅವರೊಂದಿಗೆ ಮಾತನಾಡುವಂತೆ ಸೂಚಿಸಿದ್ದೇನೆ.

ಈ ನಿಟ್ಟಿನಲ್ಲಿ ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೊಂದಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಚರ್ಚೆ ನಡೆಸಿದ್ದಾರೆ.
ಈ ಸಂಬಂಧ ಪಂಜಾಬ್ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆಕಾಂಕ್ಷ ಅವರ ಕುಟುಂಬದ ಬೆಂಬಲಕ್ಕೆ ರಾಜ್ಯ ಸರ್ಕಾರ ನಿಲ್ಲಲಿದ್ದು, ಸರ್ಕಾರದಿಂದ ಅಗತ್ಯ ಸಹಕಾರ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.



