ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಸಂಚಿನಲ್ಲಿ ನಿಷೇಧಿತ ಉಗ್ರ ಚಟುವಟಿಕೆಯಲ್ಲಿದ್ದ ಕೆಎಫ್ ಡಿ, ಪಿಎಫ್ ಐ ಕೈವಾಡ ಬಯಲಾಗಿದ್ದು, ಇನ್ನಷ್ಟು ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ಮುನ್ನ ಸುಹಾಸ್ ಶೆಟ್ಟಿ ಕೊಲೆಯ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರೀಯ ತನಿಕಾ ಸಂಸ್ಥೆಗೆ ವಹಿಸಬೇಕು.
ಈ ಮೂಲಕ ರಾಜ್ಯದಲ್ಲಿ ಮತ್ತಷ್ಟು ಹತ್ಯೆಗಳನ್ನು ತಡೆಯಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.

ಈ ಸಂಘಟನೆಗಳ ನಿಷೇಧದ ಬಳಿಕವೂ ಅಕ್ರಮ, ದೇಶದ್ರೋಹಿ ಚಟುವಟಿಕೆಯಲ್ಲಿದ್ದಂತೆ ಕಂಡು ಬರುತ್ತಿದ್ದು ಹಿಂದೂ ಕಾರ್ಯಕರ್ತರ ಮೇಲೆ ಇನ್ನಷ್ಟು ದಾಳಿಗಳಾಗಿ ಹತ್ಯೆ ಯತ್ನ ಮಾಡುವ ಮುನ್ನ ಆರೋಪಿಗಳ ಇಡೀ ತಂಡವನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲು ಕೇಂದ್ರದ ಎನ್ಐಎ ಸೂಕ್ತವಾಗಿದೆ ಎಂದು ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಬಂಧಿತನಾಗಿರುವ ನೌಶಾದ್ ಕೆ ಎಫ್ ಡಿ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದಾನೆ.

ನೌಶಾದ್ ಮತ್ತು ಸಹಚರರು ಹಿಂದೂ ಸಂಘಟನೆಯ ಪ್ರಮುಖ ಕಾರ್ಯಕರ್ತ ಸುಖಾನಂದ ಶೆಟ್ಟಿ ಅವರನ್ನು ಹತ್ಯೆ ಮಾಡಿದಲ್ಲದೆ, ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಮತ್ತೆ ಇಬ್ಬರು ಪ್ರಮುಖರ ಮನೆ ಹಾಗೂ ಅವರ ಮೇಲೆ ದಾಳಿಯನ್ನು ನಡೆಸಿದ್ದಾರೆ.
ಈತನಿಗೆ ನಿಷೇಧಿತ ಪಿಎಫ್ ಐ ಸಂಘಟನೆ ಬೆಂಗಾವಲಾಗಿ ನಿಂತಿದ್ದು ಅಪರಾಧ ಪ್ರಕರಣಗಳಲ್ಲಿ ಸಂಘಟನೆಯ ಪಾತ್ರ ಇದೆ ಎಂಬುದನ್ನು ಸಾಬೀತುಪಡಿಸಿದೆ ಎಂದಿದ್ಧಾರೆ.
