ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಈಗಾಗಲೆ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಚುರುಕುಗೊಳಿಸಿದ ಮಂಗಳೂರು ಸಿಸಿಬಿ ಪೊಲೀಸರು ಮತ್ತೆ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುರತ್ಕಲ್ ಕಳವಾರು ನಿವಾಸಿ ಅಜರುದ್ದೀನ್ @ ಅಜರ್ @ ಅಜ್ಜು(29), ಕಾಪು ಬಳಿಯ ಬೆಳಪು ನಿವಾಸಿ ಅಬ್ದುಲ್ ಖಾದರ್ @ ನೌಫಲ್(24), ಫರಂಗಿಪೇಟೆ ಬಳಿಯ ಕುಂಪನಮಜಲು ನಿವಾಸಿ ನೌಷದ್ @ ವಾಮಂಜೂರು ನೌಷದ್ @ ಚೊಟ್ಟೆ ನೌಷದ್(39) ಬಂಧಿತರು.

ಆರೋಪಿಗಳ ಪೈಕಿ ಅಜರುದ್ದೀನ್ ವಿರುದ್ಧ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ಠಾಣೆಗಳಲ್ಲಿ ಮೂರು ಕಳವು ಪ್ರಕರಣ ದಾಖಲಾಗಿರುತ್ತದೆ. ಈತನೇ ಪ್ರಮುಖ ಆರೋಪಿಗಳಿಗೆ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅಬ್ದುಲ್ ಖಾದರ್ ಆರೋಪಿಗಳು ಕೊಲೆ ಕೃತ್ಯದ ಬಳಿಕ ಕಾರಿನಲ್ಲಿ ಪರಾರಿಯಾಗುವ ವೇಳೆ ಆರೋಪಿಗಳಿಗೆ ಸಹಕರಿಸಿದ್ದ.
ಆರೋಪಿ ನೌಷದ್ ಉಳಿದ ಆರೋಪಿಗಳ ಜೊತೆ ಸಂಚು ರೂಪಿಸಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ. ಈ ಹಿಂದೆ ಸುರತ್ಕಲ್, ಬಜ್ಪೆ, ಮೂಡಬಿದ್ರಿ, ಮಂಗಳೂರು ಉತ್ತರ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆಗೆ ಸಂಚು ಸೇರಿದಂತೆ ಒಟ್ಟು 6 ಪ್ರಕರಣಗಳು ಈತನ ವಿರುದ್ಧ ದಾಖಲಾಗಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂದಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಜರುದ್ದೀನ್ ಜೈಲು ಸೇರಿದ್ದಾನೆ. ಅಬ್ದುಲ್ ಖಾದರ್ ಮತ್ತು ನೌಷದ್ ಅವರನ್ನು ಹೆಚ್ಚಿನ ತನಿಖೆಗಾಗಿ 7 ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.


