Breaking
23 Mar 2026, Mon

ಮಂಗಳೂರು: ಬಜ್ಪೆಯಲ್ಲಿ ಯುವಕನ ಮೇಲೆ ತಂಡದಿಂದ ಮಾರಕಾಸ್ತ್ರಗಳಿಂದ ಹಲ್ಲೆ

ಬಜ್ಪೆ: 2022 ಜುಲೈ ಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ ಎಂಬಾತನನ್ನು ದುಷ್ಕರ್ಮಿಗಳು‌ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.

ಬಜ್ಪೆಯ ಕಿನ್ನಿಪದವು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಗುರುವಾರ ಸಂಜೆ ತಂಡವೊಂದು ಸಾರ್ವಜನಿಕರ ಎದುರಲ್ಲೇ ತಲವಾರಿನಿಂದ ದಾಳಿ ನಡೆಸಿದೆ.

ಇದಕ್ಕೂ ಮುನ್ನ ಕಿನ್ನಿಪದವು ಪೇಟೆಯಲ್ಲಿ ಮೀನಿನ ಪಿಕ್ ಅಪ್ ಮತ್ತು ಸುಹಾಸ್ ಶೆಟ್ಟಿ ಸಂಚರಿಸುತ್ತಿದ್ದ ಕಾರು ಅಪಘಾತ ಸಂಭವಿಸಿ ಪಕ್ಕದಲ್ಲಿದ್ದ ಅಂಗಡಿಗೆ ನುಗ್ಗಿತ್ತು. ಆ ಬಳಿಕ ಮಾತಿನ ಚಕಮಕಿ ನಡೆದು ಹೊಡೆದಾಟ ಆರಂಭಗೊಂಡಿದ್ದು, ಆರೋಪಿಗಳು ಮಾರಕಾಸ್ತ್ರದಿಂದ ಕೊಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಾಳಿಯ ರಭಸಕ್ಕೆ ತಲೆಗೆ, ಕೈ, ಕಾಲಿಗೆ ಪೆಟ್ಟಾಗಿ ರಕ್ತದ ಮಡುವಿನಲ್ಲಿದ್ದ ಸುಹಾಸ್ ಎಂಬಾತನನ್ನು ಬಜ್ಪೆ ಪೊಲೀಸರು ಎಜೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯದಲ್ಲಿ ಕೊನೆಯುಸಿರು ಎಳೆದಿದ್ದಾನೆ ಎಂದು ತಿಳಿದು ಬಂದಿದೆ.

ಸುಹಾಸ್ ಶೆಟ್ಟಿ ವಿರುದ್ಧ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದು, ಬಜ್ಪೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದು, ಕೃತ್ಯ ನಡೆದಿರುವ ಸ್ಥಳವನ್ನು ಬಂದ್ ಮಾಡಿದ್ದಾರೆ.

Leave a Reply

Your email address will not be published. Required fields are marked *