Breaking
27 Jul 2026, Mon

ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ ಗೃಹಜ್ಯೋತಿ ಮರುಪರಿಶೀಲನಾ ಶಿಬಿರಕ್ಕೆ ಚಾಲನೆ

ಬೆಳ್ತಂಗಡಿ: ಸಂವಿಧಾನದ ಆಶಯಗಳಂತೆ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡಿದೆ. ರಾಜ್ಯದ ಜನಸಾಮಾನ್ಯರು ಎಲ್ಲಾ ಪಂಚಗ್ಯಾರಂಟಿಗಳನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಆದರೆ ಕೆಲವು ಸಂವಿಧಾನದ ಆಶಯಗಳನ್ನು ಒಪ್ಪದವರು ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಾ ಫಲಾನುಭವಿಗಳಾಗಿದ್ದಾರೆ ಎಂದು ದ.ಕ ಜಿಲ್ಲಾ ಕೆಡಿಪಿ ಸದಸ್ಯ, ನ್ಯಾಯವಾದಿ ಸಂತೋಷ್ ಕುಮಾರ್ ಹೇಳಿದರು.

ಅವರು ಲಾಯಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ವ್ಯಾಪ್ತಿಯ ಗೃಹಜ್ಯೋತಿ ಯೋಜನೆಯ ಮರು ಪರಿಶೀಲನಾ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಪಂಚ ಗ್ಯಾರಂಟಿ ಯೋಜನೆಯ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಜನರಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಅಭಿವೃದ್ಧಿ ಯೋಜನೆಗಳಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿ ಯೋಜನೆಯನ್ನು ಜನಸಾಮಾನ್ಯರಿಗೆ ಮುಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಲು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳ್ತಂಗಡಿ ತಾಲೂಕು ಪಂಚ ಗ್ಯಾರಂಟಿಗಳ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಮಾತನಾಡಿ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರಿಗೆ ತಲುಪಬೇಕು ಎಂಬ ಕಾರಣಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ ಗೃಹಜ್ಯೋತಿ ಮರು ಪರಿಶೀಲನಾ ಯೋಜನೆ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಅವರು ಯಾರೂ ಯಾವುದೇ ಗೊಂದಲಗಳಿಗೆ ಒಳಗಾಗದೆ ಯೋಜನೆಯ ಸದುಪಯೋಗ ಪಡೆಯಬೇಕು ಎಂದರು.

ವೇದಿಕೆಯಲ್ಲಿ ಮೆಸ್ಕಾಂ ಜೂನಿಯರ್ ಇಂಜಿನಿಯರ್ ಬೂಬ ಶೆಟ್ಟಿ, ತಾಲೂಕು ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಸದಸ್ಯರಾದ ಶ್ರೀಮತಿ ಸೌಮ್ಯ ಲಾಯಿಲ, ನೇಮಿರಾಜ್ ಕಿಲ್ಲೂರು, ವಂದನಾ ಭಂಡಾರಿ, ಮೆರಿಟಾ ಪಿಂಟೊ ಉಪಸ್ಥಿತರಿದ್ದರು.

ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ್ ಸ್ವಾಗತಿಸಿ, ಸಹಾಯಕ ಲೆಕ್ಕಾಧಿಕಾರಿ ಸುಪ್ರಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *