ಮಂಗಳೂರು: ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ಅವರನ್ನು ಸಾಹಿತ್ಯ ಸೇವೆಗಾಗಿ ಪ್ರತಿಷ್ಠಿತ “ಪಂಪ ಸದ್ಭಾವನಾ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏಪ್ರಿಲ್ 5 ರ ಶನಿವಾರ ಸಂಜೆ 5:00 ಗಂಟೆಗೆ ನಡೆಯಲಿರುವ “ರಂಗ ಸಂಭ್ರಮ 2025” ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು.ಈ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಉದ್ಘಾಟಿಸುವರು.
ಪ್ರಶಸ್ತಿಯನ್ನು ನಿವೃತ ಲೋಕಾಯುಕ್ತ- ನ್ಯಾಯಮೂರ್ತಿಗಳಾದ ಜಸ್ಟಿಸ್ ಎನ್ ಸಂತೋಷ ಹೆಗ್ಡೆ ಅವರು ಪ್ರಧಾನ ಮಾಡುವರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆವಿ ನಾಗರಾಜ್ ಬೆಂಗಳೂರು ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್ ,ನಿವೃತ್ತ ಡಿ.ಸಿ ಡಾ. ಡಿ ವಿಶ್ವನಾಥ್ ,ಡಾ ಲಕ್ಷ್ಮೀದೇವಿ ಬೆಂಗಳೂರು ವೀರೇಶ್ ಮುತಿನ ಮಠ, ಕೆಂಚನೂರು ಶಂಕರ್ ಉಪಸ್ಥಿತರಿರುವರು.
ಡಾ .ಮಾಲತಿ ಶೆಟ್ಟಿ ಮಾಣೂರು ಅವರು ಕಳೆದ 19 ವರುಷದಿಂದ ಸಾಹಿತ್ಯ ,ಪತ್ರಿಕೋದ್ಯಮ, ಸಮಾಜ ಸೇವೆ ,ಸಂಘಟನೆಯಲ್ಲಿ, ಸಕ್ರಿಯರಾಗಿದ್ದು 9 ಕೃತಿಗಳನ್ನು ಬರೆದಿದ್ದಾರೆ.ಇತರ ಸಾಹಿತಿಗಳ 42 ಕೃತಿಗಳನ್ನು ಬಿಡುಗಡೆಗೊಳಿಸಿದ್ದಾರೆ .ಪತ್ರಿಕೆಯ ವತಿಯಿಂದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಸಾಹಿತ್ಯ ಅಭಿರುಚಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ್ದಾರೆ .ಈಗಾಗಲೇ ಹಲವಾರು ರಾಜ್ಯ, ರಾಷ್ಟ್ರ, ಪ್ರಶಸ್ತಿಗಳು ಪ್ರಾಪ್ತವಾಗಿದೆ..


