Breaking
22 Mar 2026, Sun

ಡಿಕೆ ಶಿವಕುಮಾರ್ ರವರ ಹೇಳಿಕೆಯನ್ನು ವಿರೋಧಿಸಿ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ಇಂದು ಬೆಳಿಗ್ಗೆ ಬಿ.ಸಿ ರೋಡಿನಲ್ಲಿ ಪ್ರತಿಭಟನೆ ನಡೆಯಿತು.

ಬಂಟ್ವಾಳ :  ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ಇದರ ವತಿಯಿಂದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಹೇಳಿಕೆ ನೀಡಿರುವ ಉಪಮುಖ್ಯಂಮತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ವಿರೋಧಿಸಿ ಬಂಟ್ವಾಳ ‌ಮಂಡಲ ವತಿಯಿಂದ ಬಿಸಿರೋಡಿನ ಪ್ಲೈ ಓವರ್ ನ ಅಡಿಯಲ್ಲಿ ಪ್ರತಿಭಟನೆ ನಡೆಯಿತು.

ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿ ಹೇಳಿಕೆ ‌ನೀಡಿರುವ ಡಿಕೆಶಿಯವರ ಪ್ರತಿ ಕೃತಿ ದಹನ ಮಾಡಿದ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಘೋಷಣೆ ಕೂಗಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಸದನದಲ್ಲಿ ಉದ್ದೇಶಪೂರ್ವಕವಾಗಿ ಬಿಜೆಪಿಯ 18 ಶಾಸಕರನ್ನು ಸಸ್ಪಂಡ್ ಮಾಡಿದ್ದಾರೆ.6 ತಿಂಗಳ ಕಾಲ ಸಸ್ಪಂಡ್ ಮಾಡಿರುವುದು ಇತಿಹಾಸದಲ್ಲಿ ಇಲ್ಲ, ಇದೇ ಮೊದಲ ಬಾರಿಗೆ ಬಹಳ ದೊಡ್ಡ ತಪ್ಪು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮಾಡಿದ್ದಾರೆ ಎಂದು ಹೇಳಿದರು.

ಹನಿಟ್ರ್ಯಾಫ್ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿಗೆ ಸದನ ಕಾರಣವಾಗಿದ್ದ ಬಿಸಿಬಿಸಿ ವಾತಾವರಣದ ನಡುವೆ ಸಂವಿಧಾನ ವಿರೋಧಿ ಬಿಲ್ ಪಾಸ್ ಮಾಡಲು ಕಾಂಗ್ರೆಸ್ ಮುಂದಾಗಿದ್ದ ವೇಳೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅ ಸಮಯದಲ್ಲಿ ಶಾಸಕರ ಅಮಾನತು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ಸಂವಿಧಾನದ ರಕ್ಷಣೆ ಮಾಡುವವರು ಎಂದು ಹೇಳಿಕೆ ನೀಡುವ ಕಾಂಗ್ರೆಸಿಗರೇ ಇದೀಗ ಸಂವಿಧಾನವನ್ನು ತಿದ್ದುಪಡಿ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಎಂದು ಹೇಳಿದರು. ಹಾಗಾಗಿ ಮಾಡಿದ ತಪ್ಪಿಗಾಗಿ ಜನತೆಯ ಮುಂದೆ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬೇಕು,ಇಲ್ಲವೇ ರಾಜೀನಾಮೆ ‌ನೀಡಬೇಕು ಎಂದು ಒತ್ತಾಯಿಸಿದರು.

ಬಂಟ್ವಾಳ ‌ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿರಾಗಾಂಧಿ ವಂಶದಿಂದ ಬಂದ ಡಿಕೆಶಿ ಅವರು ಸಂವಿಧಾನವನ್ನು ಬದಲು ಮಾಡಿಯಾದರೂ ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾಗಿರುವುದು ನಾಚಿಕೆಯ ವಿಚಾರ ಎಂದು ಅವರು ತಿಳಿಸಿದರು.

ಬಿಜೆಪಿ ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ಹರಿಕೃಷ್ಣ ಬಂಟ್ವಾಳ, ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ, ಕಮಲಾಕ್ಷಿ ಪೂಜಾರಿ, ಪ್ರಭಾಕರ ಪ್ರಭು, ದಿನೇಶ್ ಅಮ್ಟೂರು,ದೇವಪ್ಪ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು, ದಿನೇಶ್ ಭಂಡಾರಿ ಹಾಗೂ ಮಂಡಲದ ‌ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *