ವಿಟ್ಲ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮಾ.27ರಿಂದ ಎ.7 ರ ತನಕ ನಡೆಯಲಿರುವ ಅಷ್ಟಬಂಧ ಬ್ರಹ್ಮ ಕಲಶೋತ್ಸವ, ಮೂಡಪ್ಪ ಸೇವಾ ಕಾರ್ಯಕ್ರಮ ಹಾಗೂ ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಎ.7ರಿಂದ 11 ರೈ ತನಕ ನಡೆಯುವ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಭಾನುವಾರ ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯಿತು.
ಬೆಳಿಗ್ಗೆ ಶ್ರೀಕ್ಷೇತ್ರದಲ್ಲಿ ಅರ್ಚಕ ಕೃಷ್ಣ ಬನ್ನಿಂತಾಯರ ಮೂಲಕ ವಿಶೇಷ ಪ್ರಾರ್ಥನೆ, ಪೂಜೆ ನೆರವೇರಿತು.ಆ ಬಳಿಕ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ, ಪ್ರತಿಯೊಬ್ಬರಲ್ಲೂ ಧರ್ಮ ಶ್ರದ್ಧೆಯಿದ್ದಾಗ ಭಾರತೀಯ ಧರ್ಮವನ್ನು ನಾಶ ಮಾಡಲು ಅಸಾಧ್ಯ. ಸಂಸ್ಕೃತಿಯ ಮೂಲ ಬೇರುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕು ಎಂದು ತಿಳಿಸಿದರು.
ಆಡಳಿತ ಮಂಡಳಿ ಅಧ್ಯಕ್ಷ ಎಸ್.ಆರ್ ರಂಗಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ದೇಶದಲ್ಲಿ ಧರ್ಮ ಮತ್ತು ಸಂಸ್ಕೃತಿ ಬೇರೆ ಬೇರೆಯಲ್ಲ. ಅದು ಭಾರತೀಯತೆಯ ವಿಶೇಷತೆ. ಸಂಘ ಶಕ್ತಿಯಿಂದ ಮಾತ್ರ ದೇಶವನ್ನು ಉಳಿಸಬಹುದು. ಮಧೂರು ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ಪುಣಚ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಪ್ರತಿಯೊಂದು ಮನೆಗೂ ಕ್ಲಪ್ತ ಸಮಯಕ್ಕೆ ಮುಟ್ಟಬೇಕು ಎಂದು ತಿಳಿಸಿದರು.
ಪುಣಚ ದೇವಸ್ಥಾನ ಆಡಳಿತ ಸಮಿತಿ ಉಪಾಧ್ಯಕ್ಷ, ಮಧೂರು ಬ್ರಹ್ಮಕಲಶೋತ್ಸವ ಪುಣಚ ಗ್ರಾಮ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲು ಗುತ್ತು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪುಣಚ ದೇವಸ್ಥಾನ ಆಡಳಿತ ಸಮಿತಿ, ಬ್ರಹ್ಮಕಲಶೋತ್ಸವ ಪುಣಚ ಗ್ರಾಮ ಸಮಿತಿ, ದೇವಿ ಭಜನಾ ಮಂಡಳಿ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.
ದೇವಿ ಭಜನಾ ಮಂಡಳಿ ಅಧ್ಯಕ್ಷ ಕಿರಣ್ ಚಂದ್ರ ಪ್ರಾರ್ಥಿಸಿದರು. ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರ ಗುಂಡಿ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಪುಣಚ ಗ್ರಾಮ ಸಮಿತಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ದೇವರ ಗುಂಡಿ ವಂದಿಸಿದರು. ಶ್ರೀಮತಿ ಗಂಗಮ್ಮ ಶಾಸ್ತ್ರಿ ಮಣಿಲ, ರಾಮಕೃಷ್ಣ ಮೂಡಂಬೈಲು ಕಾರ್ಯಕ್ರಮ ನಿರೂಪಿಸಿದರು.




