Breaking
20 Oct 2026, Tue

ಬಿ.ಸಿ.ರೋಡಿನಲ್ಲಿ ಸರ್ವೀಸ್ ರಸ್ತೆಯೇ ಕೆರೆ! ಬಸ್ ಪ್ರಯಾಣಿಕರ ಪರದಾಟಕ್ಕೆ ಕೊನೆಯೇ ಇಲ್ಲ

ಬಂಟ್ವಾಳ: ಬಿ.ಸಿ.ರೋಡು ಖಾಸಗಿ ಬಸ್ ನಿಲ್ದಾಣದ ಎದುರಿನ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯ ಒಂದು ಬದಿಯ ಸರ್ವೀಸ್ ರಸ್ತೆಯಲ್ಲಿ ಮಳೆನೀರು ನಿಂತು ಕೃತಕ ಕೆರೆಯಂತಾಗಿದ್ದು, ವಾಹನ ಸವಾರರು, ಪಾದಚಾರಿಗಳು ಹಾಗೂ ಬಸ್ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.


ಸೋಮವಾರ ಸಂಜೆ ಗುಡುಗು ಸಹಿತ ಭಾರೀ ಮಳೆಯಾದ ಪರಿಣಾಮ ಸರ್ವೀಸ್ ರಸ್ತೆಯುದ್ದಕ್ಕೂ ನೀರು ನಿಂತಿತ್ತು. ಮಳೆನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಮಳೆಗಾಲದಲ್ಲಿ ಈ ಸಮಸ್ಯೆ ನಿರಂತರವಾಗಿ ಮರುಕಳಿಸುತ್ತಿದ್ದರೂ, ಶಾಶ್ವತ ಪರಿಹಾರ ಮಾತ್ರ ಮರೀಚಿಕೆಯಾಗಿದೆ.


ಈ ಸಮಸ್ಯೆಯ ಕುರಿತು ಹಲವು ಬಾರಿ ಪತ್ರಿಕೆಗಳು ಹಾಗೂ ಇತರ ಮಾಧ್ಯಮಗಳು ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿವೆ. ಆದರೂ ಹೆದ್ದಾರಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ಸ್ಥಳೀಯ ನಾಗರಿಕರಿಂದ ವ್ಯಕ್ತವಾಗಿದೆ. ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ರಸ್ತೆಯಲ್ಲಿ ಮಂಗಳೂರು ಹಾಗೂ ಪೊಳಲಿ–ಕೈಕಂಬ ಮಾರ್ಗವಾಗಿ ಸಂಚರಿಸುವ ಖಾಸಗಿ ಮತ್ತು ಸರ್ಕಾರಿ ಬಸ್ಗಳು ನಿಲುಗಡೆಗೊಳ್ಳುತ್ತವೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಬಸ್ ತಂಗುದಾಣವನ್ನೂ ನಿರ್ಮಿಸಲಾಗಿದೆ. ಆದರೆ, ಬಸ್ಗಾಗಿ ಕಾಯುವ ಪ್ರಯಾಣಿಕರು ರಸ್ತೆ ಬದಿಯಲ್ಲಿ ನಿಂತಿರುವ ಮಳೆನೀರನ್ನು ದಾಟಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ವರ್ಷಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಸ್ಪಂದಿಸಿ, ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Leave a Reply

Your email address will not be published. Required fields are marked *