Breaking
2 Oct 2026, Fri

ಜ್ಞಾನ ಮತ್ತು ವಿವೇಕದಿಂದ ಸಮಾಜ ಪರಿವರ್ತನೆ – ಲೋಹಿತ್ ಕನಪಾದೆ

ತೆಂಕ ಕಜೆಕಾರು: ಸಮಾಜದ ಪ್ರಗತಿಗೆ ಜ್ಞಾನ ಮತ್ತು ವಿವೇಕ ಅತ್ಯಂತ ಅಗತ್ಯ. ಅಂಧಶ್ರದ್ಧೆ ಹಾಗೂ ಮೂಢನಂಬಿಕೆಗಳಿಂದ ದೂರವಾಗಿ ವಿಚಾರಶೀಲತೆಯನ್ನು ಬೆಳೆಸಿಕೊಂಡಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಆಪ್ತ ಸಮಾಲೋಚಕ, ಆಳ್ವಾಸ್ ಮೂಡಬಿದಿರೆ ಮನೋರೋಗ ವಿಭಾಗದ ಲೋಹಿತ್ ಕನಪಾದೆ ಹೇಳಿದರು.

ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಪೂಂಜಾಲಕಟ್ಟೆ ತೆಂಕ ಕಜೆಕಾರು ನಿವಾಸಿ ಅಶ್ವಿನ್ ಅಮೀನ್ ಅವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ–80ನೇ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿದ್ದ ಅಜ್ಞಾನ, ಅಸಮಾನತೆ ಹಾಗೂ ಅನಿಷ್ಟ ಆಚರಣೆಗಳ ವಿರುದ್ಧ ಜಾಗೃತಿ ಮೂಡಿಸಿ, ಶಿಕ್ಷಣ ಮತ್ತು ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಅವರ ಚಿಂತನೆಗಳು ಮನುಷ್ಯನನ್ನು ವಿಚಾರಶೀಲನನ್ನಾಗಿ ಮಾಡುವುದರ ಜೊತೆಗೆ ಮಾನವೀಯತೆ, ಸಮಾನತೆ ಮತ್ತು ಸಹೋದರತ್ವದ ಬದುಕಿಗೆ ದಾರಿ ತೋರಿಸುತ್ತವೆ ಎಂದರು.

ಅಂಧಶ್ರದ್ಧೆಯ ಹೆಸರಿನಲ್ಲಿ ನಡೆಯುವ ಆಚರಣೆಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾವುದೇ ವಿಚಾರವನ್ನು ಕೇವಲ ನಂಬಿಕೆಯ ಆಧಾರದಲ್ಲಿ ಸ್ವೀಕರಿಸುವ ಬದಲು ಅದರ ಸತ್ಯಾಸತ್ಯತೆಯನ್ನು ಅರಿತು ವಿವೇಕದಿಂದ ನಿರ್ಧಾರ ಕೈಗೊಳ್ಳಬೇಕು. ಯುವಜನತೆ ವೈಜ್ಞಾನಿಕ ಮನೋಭಾವದೊಂದಿಗೆ ಮುನ್ನಡೆಯುವ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆಗೆ ಕಾರಣರಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ, ನಿರ್ದೇಶಕರಾದ ನವೀನ್ ಕುಡುಮೇರ್, ಶೇಖರ್ ಅಗಲ್ದೋಡಿ, ಸಂಘಟನಾ ಕಾರ್ಯದರ್ಶಿಗಳಾದ ಚಿಂತನ್ ರಾಜ್ ಹಾಗೂ ಸರಿತಾ ಮೂರ್ಜೆ, ಸದಸ್ಯರಾದ ಯಶೋಧರ ಕಡಂಬಳಿಕೆ, ಯತೀಶ್ ಬೊಳ್ಳಾಯಿ, ಮಧುಸೂದನ್ ಮಧ್ವ, ಸದಾನಂದ ವಾಮದಪದವು, ಲಿತೀಶ್ ವಾಮದಪದವು, ತ್ರಿವೇಣಿ ರಾಜೇಶ್, ಭವ್ಯಶ್ರೀ ಪ್ರಜಿತ್, ನಾರಾಯಣ ಪಲ್ಲಿಕಂಡ, ಸೌಮ್ಯ ಹಾಗೂ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ, ನಾಗೇಶ್ ಪೊನ್ನೋಡಿ, ಶಿವಾನಂದ ಎಂ., ಅರುಣ್ ಮಹಾಕಾಳಿಬೆಟ್ಟು, ಹರೀಶ್ ಕೋಟ್ಯಾನ್ ಕುದನೆ ಉಪಸ್ಥಿತರಿದ್ದರು.

ಭಜನಾ ಸಂಕೀರ್ತನೆಯಲ್ಲಿ ಸಾತ್ವಿಕ್ ದೇರಾಜೆ ಸಂಗೀತ ಸೇವೆ ನೀಡಿದರು. ಆತಿಥ್ಯ ವಹಿಸಿದ್ದ ಅಶ್ವಿನ್ ಅಮೀನ್ ಆಗಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ಧನ್ಯವಾದ ಅರ್ಪಿಸಿದರು. ಘಟಕದ ಅಧ್ಯಕ್ಷ ಕಿರಣ್‌ರಾಜ್ ಪೂಂಜಾರೆಕೊಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *