ಮೈಸೂರು: ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ‘ರಕ್ತದ ನೆರವು–2026’ ರಕ್ತದಾನ ಕಾರ್ಯಕ್ರಮದಲ್ಲಿ ಚಿರಜೀವ ಸೇವಾ ಟ್ರಸ್ಟ್ ಹಾಗೂ ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷ ರಕ್ತದಾನಿ ಮಂಜು ಅವರು ತಮ್ಮ 40ನೇ ಬಾರಿ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.

ಕಳೆದ ಐದು ವರ್ಷಗಳಿಂದ ಮೈಸೂರು ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದಾನಿಗಳನ್ನು ಸಂಪರ್ಕಿಸಿ ನೆರವು ಒದಗಿಸುತ್ತಿರುವ ಮಂಜು ಅವರು, ಇದುವರೆಗೆ 5,000ಕ್ಕೂ ಹೆಚ್ಚು ರೋಗಿಗಳಿಗೆ ರಕ್ತದ ನೆರವು ದೊರಕುವಂತೆ ಮಾಡಿದ್ದಾರೆ.

ಸ್ವತಃ 40 ಬಾರಿ ರಕ್ತದಾನ ಮಾಡುವುದರ ಜೊತೆಗೆ ಇತರರನ್ನೂ ರಕ್ತದಾನಕ್ಕೆ ಪ್ರೇರೇಪಿಸುತ್ತಿರುವ ಅವರು, “ರಕ್ತದಾನವು ಅಮೂಲ್ಯವಾದ ದಾನ. ನಾವು ನೀಡುವ ರಕ್ತ ಮತ್ತೊಬ್ಬರ ಬದುಕಿನಲ್ಲಿ ಆಶಾಕಿರಣವಾಗಬಹುದು” ಎಂದು ಹೇಳಿದರು. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

40ನೇ ರಕ್ತದಾನದ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರು ಹಾಗೂ ರಕ್ತದಾನಿಗಳು ಮಂಜು ಅವರನ್ನು ಅಭಿನಂದಿಸಿದರು. ಅವರ ನಿರಂತರ ಸಮಾಜಮುಖಿ ಸೇವೆ ಹಾಗೂ ರಕ್ತದಾನದ ಮೂಲಕ ಜೀವ ಉಳಿಸುವ ಕಾರ್ಯಕ್ಕೆ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.


