Breaking
2 Oct 2026, Fri

ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗಕ್ಕೆ: ಮೊದಲ ದಿನವೇ ಅಧಿಕಾರಿಗಳಿಂದ ಪರಿಶೀಲನೆ

ಮಂಗಳೂರು: ಪಾಲಕ್ಕಾಡ್ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶ ಇದೀಗ ಮೈಸೂರು ವಿಭಾಗದ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ವರ್ಗಾವಣೆಯ ಬಳಿಕ ಮೊದಲ ದಿನವಾದ ಗುರುವಾರ ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ರೈಲು ಸೇವೆಗಳು ಯಾವುದೇ ಅಡಚಣೆಯಿಲ್ಲದೆ ಮುಂದುವರಿದವು.


ಮೈಸೂರು ವಿಭಾಗದ ಸಹಾಯಕ ವಿಭಾಗೀಯ ನಿಯಂತ್ರಣಾಧಿಕಾರಿ ಶಮ್ಮಾಸ್ ಹಮೀದ್ ನೇತೃತ್ವದ ಅಧಿಕಾರಿಗಳು ಮಂಗಳೂರು ಪ್ರದೇಶದ ವಿವಿಧ ರೈಲು ಕೇಂದ್ರಗಳಿಗೆ ಭೇಟಿ ನೀಡಿ, ಹೊಸ ವ್ಯವಸ್ಥೆಯ ಕಾರ್ಯಾಚರಣೆಯನ್ನು ಪರಿಶೀಲಿಸಿದರು.


ಮಂಗಳೂರು ಸೆಂಟ್ರಲ್ ಹಾಗೂ ಜಂಕ್ಷನ್ ಜೊತೆಗೆ ಪಣಂಬೂರು, ಜೋಕಟ್ಟೆ ಸೇರಿದಂತೆ ಪ್ರಮುಖ ಕೇಂದ್ರಗಳಿಗೆ ಭೇಟಿ ನೀಡಿದ ಅಧಿಕಾರಿಗಳು ರೈಲು ಸಂಚಾರ, ಸುರಕ್ಷತಾ ವ್ಯವಸ್ಥೆ, ನಿರ್ವಹಣಾ ಚಟುವಟಿಕೆಗಳು ಮತ್ತು ಪ್ರಯಾಣಿಕರ ಸೇವೆಗಳ ಕುರಿತು ಪರಿಶೀಲನೆ ನಡೆಸಿದರು.
ರೈಲ್ವೆ ಸಿಬಂದಿಯೊಂದಿಗೆ ಚರ್ಚೆ ನಡೆಸಿದ ಅಧಿಕಾರಿಗಳು, ರೈಲು ಕಾರ್ಯಾಚರಣೆಗೆ ಅಗತ್ಯವಿರುವ ಮಾನವ ಸಂಪನ್ಮೂಲ, ಉಪಕರಣಗಳು ಹಾಗೂ ಮೂಲಸೌಕರ್ಯಗಳ ಲಭ್ಯತೆ ಕುರಿತು ಮಾಹಿತಿ ಪಡೆದರು. ಸಿಬಂದಿ ಸಿದ್ಧತೆ ಹಾಗೂ ಸುರಕ್ಷತಾ ಕ್ರಮಗಳಿಗೂ ಆದ್ಯತೆ ನೀಡಲಾಯಿತು.


ವರ್ಗಾವಣೆಯ ಹಿನ್ನೆಲೆಯಲ್ಲಿ ಎದುರಾಗಬಹುದಾದ ಕಾರ್ಯಾಚರಣಾ ಅಗತ್ಯಗಳನ್ನು ತ್ವರಿತವಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕ್ಷೇತ್ರ ಮಟ್ಟದ ಸಿಬಂದಿ ಮತ್ತು ಮೈಸೂರು ವಿಭಾಗೀಯ ಕಚೇರಿಯ ನಡುವೆ ನಿರಂತರ ಸಮನ್ವಯ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ಮಂಗಳೂರು ರೈಲು ಪ್ರದೇಶವನ್ನು ಹೊಸ ವಿಭಾಗದ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಮೈಸೂರು ವಿಭಾಗದ ಅಧಿಕಾರಿಗಳು ಹಾಗೂ ಸಿಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *