ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಭಾಗದ ಜನರ ದಶಕಗಳ ಬೇಡಿಕೆಯಾಗಿದ್ದ ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಡಿ ₹65 ಲಕ್ಷ ಅನುದಾನ ಮಂಜೂರಾಗಿದ್ದು, ಸೆ.28ರಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜಾ ಅವರು ಗಣ್ಯರು ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸಿದರು.

ದಶಕಗಳ ಬೇಡಿಕೆಯನ್ನು ಈಡೇರಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂಸದರು ಹಾಗೂ ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ವಿವಿಧ ಬೇಡಿಕೆಗಳ ಮನವಿ ಪತ್ರಗಳನ್ನು ಸಂಸದರು ಹಾಗೂ ಶಾಸಕರಿಗೆ ಸಲ್ಲಿಸಿದರು. ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಇಂದಬೆಟ್ಟು ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಎಸ್. ಇಂದಬೆಟ್ಟು, ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ಆಶಾಲತಾ, ಆನಂದ ಅಡಿಲು, ಸತೀಶ್ ಗೌಡ ಚೌಕದಕಟ್ಟೆ, ಪ್ರಮೋದ್ ಕುಮಾರ್ ಬೆದ್ರಬೆಟ್ಟು, ತಾಲೂಕು ಆರೋಗ್ಯಾಧಿಕಾರಿ ಸೇರಿದಂತೆ ವಿವಿಧ ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಬೂತ್ ಸಮಿತಿ ಅಧ್ಯಕ್ಷರು, ಯುವಮೋರ್ಚಾ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಚಂದ್ರಶೇಖರ ಕಾಂಜಾನು ಕಾರ್ಯಕ್ರಮ ನಿರೂಪಿಸಿದರು.




