ಬಂಟ್ವಾಳ: ಬಸ್ ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ದಾಸಕೋಡಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಮೃತರನ್ನು ಬಾಳ್ತಿಲ ನಿವಾಸಿ ಹರೀಶ್ ನಾಯ್ಕ್ (46) ಎಂದು ಗುರುತಿಸಲಾಗಿದೆ. ಅವರು ಮೇಸ್ತ್ರಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಬುಧವಾರ ಸಂಜೆ ಕೆಲಸ ಮುಗಿಸಿಕೊಂಡು ಕಲ್ಲಡ್ಕ ಕಡೆಯಿಂದ ಬಸ್ನಲ್ಲಿ ಮನೆಗೆ ತೆರಳುತ್ತಿದ್ದ ಹರೀಶ್ ನಾಯ್ಕ್, ದಾಸಕೋಡಿಯಲ್ಲಿ ಬಸ್ನಿಂದ ಇಳಿದಿದ್ದರು. ಬಳಿಕ ರಸ್ತೆ ಬದಿಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ತೀವ್ರತೆಗೆ ಹರೀಶ್ ನಾಯ್ಕ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ಮಾಹಿತಿ ತಿಳಿದು ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತಕ್ಕೆ ಕಾರಣ ಹಾಗೂ ಕಾರಿನ ಚಾಲಕನ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.




